ಶೃಂಗೇರಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ | ತಾಯಿ ಸೇರಿ ಮೂವರು ಆರೋಪಿಗಳಿಗೆ 20 ವರ್ಷ, ಓರ್ವನಿಗೆ 22 ವರ್ಷ ಜೈಲು ಶಿಕ್ಷೆ ಪ್ರಕಟ
ಚಿಕ್ಕಮಗಳೂರು: ಶೃಂಗೇರಿ ಫೋಕ್ಸೋ ಪ್ರಕರಣದಲ್ಲಿ ದೋಷಿಗಳು ಎಂದು ಸಾಬೀತಾಗಿದ್ದ ನಾಲ್ವರು ಆರೋಪಿಗಳ ಪೈಕಿ ಮೂವರಿಗೆ 20 ವರ್ಷ ಹಾಗೂ ಓರ್ವ ಆರೋಪಿಗೆಗೆ 22 ವರ್ಷ ಜೈಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ತ್ವರಿತಗತಿ ಕೋರ್ಟ್ ತೀರ್ಪು ನೀಡಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶೃಂಗೇರಿ ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿದ್ದ ನಾಲ್ವರಿಗೆ ಚಿಕ್ಕಮಗಳೂರು ಶೀಘ್ರಗತಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಅಲ್ಲದೆ, ನಾಲ್ವರಿಗೂ ತಲಾ 25 ಸಾವಿರ ದಂಡ ವಿಧಿಸಿದೆ.
ಬಾಲಕಿಯ ತಾಯಿ ಗೀತಾದೇವಿ, ಗಿರೀಶ್ , ಚರಣ್ ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 22 ವರ್ಷಗಳ ಕಠಿಣ ಜೈಲು ಶಿಕ್ಷೆಯ ಆದೇಶ ನೀಡಲಾಗಿದೆ.
ಶೃಂಗೇರಿಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಮಗಳನ್ನು ತಾಯಿಯೇ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು. 2020 ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಲಾಗಿತ್ತು. 2021ರ ಜನವರಿ 27 ರಂದು ಪ್ರಕರಣ ದಾಖಲಾಗಿತ್ತು ನೂರಾರು ಜನರ ವಿಚಾರಣೆ ನಡೆದು ಒಟ್ಟು 53 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ನಾಲ್ಕು ಜನರ ಮೇಲಿನ ಅಪರಾಧ ಚಿಕ್ಕಮಗಳೂರು ತ್ವರಿತಗತಿ ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಇದೇ ಪ್ರಕರಣದಲ್ಲಿ ಉಳಿದ 49 ಜನರನ್ನು ಪ್ರಕರಣದಿಂದ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಈ ಪ್ರಕರಣದಲ್ಲಿ 38 ವಿವಿಧ ರೀತಿಯ ಚಾರ್ಜ್ ಶೀಟ್ ಗಳನ್ನು ಶೃಂಗೇರಿ ಪೊಲೀಸರು ಸಲ್ಲಿಸಿದ್ದರು. ಇಂದು ತ್ವರಿತಗತಿ ಕೋರ್ಟ್ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಅವರು ಅಪರಾಧಿಗಳಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.