ಗ್ಯಾರಂಟಿ ಯೋಜನೆಗಳು ಸಂಕಷ್ಟದಲ್ಲಿರುವ ಜನರ ಬದುಕಿಗೆ ಶಕ್ತಿ ನೀಡುವಲ್ಲಿ ಯಶಸ್ವಿಯಾಗಿದೆ: ಸಚಿವ ಕೆ.ಜೆ.ಜಾರ್ಜ್

Update: 2024-02-10 11:56 GMT

ಚಿಕ್ಕಮಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಬದುಕಿನಲ್ಲಿ ಸುಧಾರಣೆ ತರುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಜನರಿಗೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಅಧಿಕಾರಕ್ಕೆ ಬಂದ ಕೇವಲ 8 ತಿಂಗಳುಗಳಲ್ಲಿ ಜಾರಿ ಮಾಡಿದೆ. ಈ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಈ ಗ್ಯಾರಂಟಿಗಳು ಮಹಿಳೆಯರೂ ಸೇರಿದಂತೆ ರಾಜ್ಯದ ಎಲ್ಲ ವರ್ಗದ ಜನರ ಬದುಕಿಗೆ ಶಕ್ತಿ ನೀಡುತ್ತಿದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ತಾಲೂಕು ಮಟ್ಟದ 5 ಗ್ಯಾರಂಟಿಗಳಿಗೆ ಸಂಬಂಧಿಸಿದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರ ಬದುಕಿನ ಸುಧಾರಣೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಐದು ಮಹತ್ವದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಿತ್ತು. ರಾಜ್ಯದ ಜನರು ಈ ಗ್ಯಾರಂಟಿ ಯೋಜನೆಗಳನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಸರಕಾರ ಜನರಿಗೆ ನಂಬಿಕೆ ದ್ರೋಹ ಮಾಡದೇ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಬಡ ಜನರಿಗೆ ಶಕ್ತಿ ನೀಡಲಾಗಿದೆ. ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ತಿಳಿಸಿದರು.

ನೋಟು ಬದಲಾವಣೆ, ಜಿಎಸ್‍ಟಿ, ಬೆಲೆ ಏರಿಕೆಯಂತಹ ಕೇಂದ್ರ ಸರಕಾರದ ಆರ್ಥಿಕ ನೀತಿಗಳಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರು ಕಷ್ಟಗಳನ್ನು ಎದುರಿಸಬೇಕಾಯಿತು. ವಿಮಾನನಿಲ್ದಾಣದಲ್ಲೆ ಕಟ್ಟೆಚ್ಚರ ವಹಿಸಿದ್ದರೇ ಕೊರೊನಾ ಸೋಂಕು ದೇಶವನ್ನು ಕಾಡುತ್ತಿರಲಿಲ್ಲ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಿಂದಾಗಿ ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ಗೋದಾಮುಗಳಲ್ಲಿ ಆಹಾರ ಶೇಖರಿಸಲು ಸಾಧ್ಯವಾಯಿತು. ದೇಶಕ್ಕೆ ಉದಾರನೀತಿಯನ್ನು ತರಲಾಯಿತು. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನಹಕ್ಕುಗಳನ್ನು ನೀಡಿದರು. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಮತ್ತು ಸಮಾಜಿಕ ಸ್ವಾತಂತ್ರ್ಯ ದೊರೆಯಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತು. ಇದನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಿದೆ. ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡಜನರು ಬ್ಯಾಂಕಿನಲ್ಲಿ ಖಾತೆ ತೆರೆಯಲು ಸಾಧ್ಯವಾಯಿತು. 20 ಅಂಶಗಳ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವ ಕೆಲಸ ನಡೆಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುವಿಗಳಾದ ಅಂತೋಣಿ, ಪ್ರೀತಿ, ಜಮೀಲಾ, ತರೀಕೆರೆಯ ಲಕ್ಷ್ಮಿ, ದೇವರಳ್ಳಿಯ ರೂಪಾ ಮತ್ತಿತರರು ಯೋಜನೆಗಳ ಪ್ರಯೋಜನದ ಅನುಭವಗಳನ್ನು ಹಂಚಿಕೊಂಡರು. ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಎಸ್ಪಿ ಡಾ.ವಿಕ್ರಮ್‍ಅಮಟೆ, ಉಪವಿಭಾಗಾಧಿಕಾರಿ ದಲ್ಚಿತ್‍ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News