ಮೋದಿ ಸರಕಾರದ ಆಡಳಿತದಿಂದ ಕಂಗೆಟ್ಟಿದ್ದ ಜನರಿಗೆ ʼಗ್ಯಾರಂಟಿʼಗಳು ಆರ್ಥಿಕ ಶಕ್ತಿ ನೀಡಿದೆ : ಸಚಿವ ಕೆ.ಜೆ.ಜಾರ್ಜ್

Update: 2024-04-16 13:10 GMT

ಚಿಕ್ಕಮಗಳೂರು : ದೇಶದ ಭವಿಷ್ಯವನ್ನು ಸದೃಢಗೊಳಿಸುವ ಹಾಗೂ ಯುವಪೀಳಿಗೆಯನ್ನು ಜಾತ್ಯತೀತವಾಗಿ ಮುಂಚೂಣಿಗೆ ತರುವುದೇ ಕಾಂಗ್ರೆಸ್ ಪಕ್ಷದ ಮೂಲಧ್ಯೇಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ನಿರಂತರ ಸಮುದಾಯ ಭವನದಲ್ಲಿ ಆರಂಭಿಸಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ವಾರ್ ರೂಮ್‍ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, "ಯುವಕರನ್ನು ಉದ್ಯೋಗವಂತರನ್ನಾಗಿ  ಮಾಡುತ್ತೇವೆಂದು ಕೇಂದ್ರ ಸರಕಾರ ಸುಳ್ಳನೇ ಹೇಳಿಕೊಂಡು ರಾಜಕಾರಣ ಮಾಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರದ ಆಡಳಿತದಿಂದಾಗಿ ಜನಸಾಮಾನ್ಯರು ಬೆಲೆಏರಿಕೆಯಂತಹ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೀಗೆ ಸಂಕಷ್ಟದಲ್ಲಿರುವ ಜನರಿಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ" ಎಂದರು.

ರಾಜ್ಯದಲ್ಲಿ ಸುಮಾರು 1.65 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಆರ್ಥಿಕ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಉಚಿತ ಅಕ್ಕಿ ವಿತರಣೆಯಲ್ಲೂ ಮಾತನ್ನು ತಪ್ಪದೇ ಪ್ರಾಮಾಣಿಕವಾಗಿ ನಡೆದುಕೊಂಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರ, ಬಡವರ ಪಾಲಿನ ಅಕ್ಕಿಯನ್ನು ನೀಡದೇ ನಾಟಕವಾಡುತ್ತಿರುವುದು ಕೇಂದ್ರ ಸರಕಾರ ಎಂಬುದನ್ನು ಜನರು ಅರಿಯಬೇಕಿದೆ. ಕಾಂಗ್ರೆಸ್ ಪಕ್ಷ ಹಿಂದೆಯೂ ಜನಪರ ಆಡಳಿತ ನೀಡಿದೆ, ಈಗಲೂ ನೀಡುತ್ತಿದೆ, ಮುಂದೆಯೂ ನೀಡುತ್ತದೆ. ದೇಶದ ಜನರ ಕಷ್ಟ ಪರಿಹಾರ ಹಾಗೂ ಸರ್ವತೋಮುಖ ಏಳಿಗೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್, ಮುಖಂಡರಾದ ಹರೀಶ್, ನಯಾಝ್, ಶ್ರೀಕಾಂತ್, ಪ್ರದೀಪ್, ಅನ್ಸರ್ ಆಲಿ, ಕೆ.ಭರತ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News