ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ; ಶಾಲೆಗಳಿಗೆ ರಜೆ ಘೋಷಣೆ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆ ಗುರುಳಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣ ಸಮೀಪದಲ್ಲಿ ಪ್ರವಾಸಿಗರ ಕಾರೊಂದು ನದಿಗೆ ಉರುಳಿ ಬಿದ್ದಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಶುಕ್ರವಾರ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.
ಶುಕ್ರವಾರ ಮಲೆನಾಡು ಭಾಗದಲ್ಲಿ ಆಗಾಗ್ಗೆ ಭಾರೀ ಮಳೆಯಾಗಿದ್ದು, ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಕಳಸ ಭಾಗದಲ್ಲಿ ಭಾರೀ ಮಳೆಯಾಗಿದೆ. ಇದರ ಪರಿಣಾಮ ರಸ್ತೆಗಳ ಮೇಲೆ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕರ ನೆರವಿನೊಂದಿಗೆ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳಲ್ಲಿನ ನೀರಿನ ಹರಿವು ಹೆಚ್ಚಳಗೊಂಡಿದೆ. ಮೂಡಿಗೆರೆ ಭಾಗದಲ್ಲಿ ಗುರುವಾರ ಭಾರೀ ಮಳೆಯಾದ ಪರಿಣಾಮ ಮೂಡಿಗೆರೆ ಹಾಗೂ ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ತಾಲೂಕು ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿತ್ತು. ರಜೆಯನ್ನು ಶುಕ್ರವಾರ ತಡವಾಗಿ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ರಜೆಯ ಮಾಹಿತಿ ಇಲ್ಲದ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಗಮಿಸಿದ್ದರು. ಆದರೆ, ರಜೆ ಮಾಹಿತಿ ಬಳಿಕ ಮನೆಗೆ ತೆರಳಿದರು.
ಮಳೆಯ ಪರಿಣಾಮ ಕಳಸ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ ಮಾಡಲಾಗಿತ್ತು. ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ಮರ ತೆರವುಗೊಳಿಸಿದರು
ಶುಕ್ರವಾರ ಮಧ್ಯಾಹ್ನ ಭಾರೀ ಮಳೆಯಿಂದಾಗಿ ರಸ್ತೆ ಕಾಣದೇ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಯ ಅಂಚಿಗೆ ಉರುಳಿತ್ತು. ನದಿ ದಡದಲ್ಲಿ ನೀರು ಕಡಿಮೆ ಇದ್ದ ಪರಿಣಾಮ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಗುರುವಾರ ಸುರಿದ ಭಾರೀ ಮಳೆಗೆ ಹೋಲಿಸಿದಲ್ಲಿ ಶುಕ್ರವಾರ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಚಿಕ್ಕಮಗಳೂರು ತಾಲೂಕಿನಲ್ಲಿ ಕೆಲ ಹೊತ್ತು ಸಾಧಾರಣ ಮಳೆಯಾಗಿದ್ದರೇ, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣ ಇತ್ತು. ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.