ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ

Update: 2024-01-01 14:30 GMT

ಮೂಡಿಗೆರೆ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ (58) ಸೋಮವಾರ ಬೆಳಗ್ಗೆ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲಿಂಗನಾಯಕ್ ಅವರು ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹಾಲು ತರುತ್ತೇನೆಂದು ಪಟ್ಟಣಕ್ಕೆ ಹೋದವರು ಮರಳಿ ಮನೆಗೆ ಹಿಂದಿರುಗಿಲ್ಲ. ಹಾಲು ತರಲು ಹೋದವರು ಇನ್ನೂ ಮನೆಗೆ ಬರಲಿಲ್ಲವೆಂದು ಅವರ ಪತ್ನಿ ಹುಡುಕಾಟ ನಡೆಸಿದ್ದಾರೆ. ಆದರೆ ಲಿಂಗನಾಯಕ್ ಅವರು ನೇರವಾಗಿ ಕಚೇರಿಗೆ ತೆರಳಿದ್ದು, ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಲಿಂಗಾನಾಯಕ್ ಅವರಿಗೆ ಕೆಲಸದ ಒತ್ತಡ ಅಧಿಕವಾಗಿತ್ತು. ಇತ್ತೀಚೆಗೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆ ಬಳಿಕ ಡಿ. ದರ್ಜೆ ನೌಕರರೊಬ್ಬರ ಕ್ಲಸ್ಟರ್ ಕೆಲಸವೂ ಲಿಂಗಾನಾಯಕ್ ಅವರೇ ಮಾಡಬೇಕಿತ್ತು. ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕೂಡ ಇತ್ತು. ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸ ಕಾರ್ಯ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರಾತ್ರಿ ನಿದ್ದೆ ಕೂಡ ಬರುತ್ತಿರಲಿಲ್ಲ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಲಿಂಗನಾಯಕ್ ಬರೆದಿದ್ದ 2 ಪುಟಗಳ ಡೆತ್‍ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ವಾರಸುದಾರರಿಗೆ ನೀಡಲಾಯಿತು. ಮೃತರು ಪತ್ನಿ, ಓರ್ವ ಪುತ್ರ,  ಪುತ್ರಿ  ಅಗಲಿದ್ದಾರೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News