ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2024-06-12 18:24 GMT

ಚಿಕ್ಕಮಗಳೂರು: ತಾಲೂಕಿನಲ್ಲಿ 49 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿದ್ದು, ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂ ಜ್ವರದಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ, ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಜಿಪಂ ಸಿಇಒ, ಎಸ್ಪಿ, ಜಿಲ್ಲಾ ಆರೋಗ್ಯಾಧಿಕಾರಿ ಅವರೊಂದಿಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜೂ.12ರವರೆಗೆ ಒಟ್ಟು 346 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಬಹುತೇಕ ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಜೂನ್ ತಿಂಗಳಲ್ಲಿ ಮಳೆ ಹೆಚ್ಚಾದ ಪರಿಣಾಮ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚಾಗಿದ್ದು, ಸದ್ಯ 49 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 35 ಮಂದಿಯಲ್ಲಿ ಸಾಮಾನ್ಯ ಜ್ವರ ಇದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ವೈದ್ಯರ ಕೊರತೆ, ಹಾಸಿಗೆ, ಔಷಧಗಳ ಕೊರತೆಯೂ ಇಲ್ಲ. ಸೋಂಕಿತರು ಗುಣಮುಖರಾಗುತ್ತಿದ್ದು, ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ ಎಂದರು.

ಚಿಕ್ಕಮಗಳೂರು ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚು ಕಂಡು ಬಂದಿವೆ. ಇದಕ್ಕೆ ಕಾರಣ ದಿಢೀರ್ ಮಳೆ, ಎಲ್ಲೆಡೆ ನೀರಿನ ಸಂಗ್ರಹವಾದ ಪರಿಣಾಮ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದರಿಂದ ಡೆಂಗ್ ಜ್ವರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೂಲಕ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿದೆ. ಲಾರ್ವ ಸರ್ವೆ, ಫಾಗಿಂಗ್‍ನಂತನ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ. ನಗರಸಭೆ ವತಿಯಿಂದಲೂ ನಗರದ ಎಲ್ಲ ಬಡಾವಣೆಗಳ ವ್ಯಾಪ್ತಿಯಲ್ಲೂ ಲಾರ್ವ ಸರ್ವೆ, ಸ್ವಚ್ಛತೆಗೆ ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವುದು ಬೇಡ, ಆದರೆ ಎಚ್ಚರಿಕೆ ವಹಿಸಲೇಬೇಕು, ಸೊಳ್ಳೆಗಲ ಉತ್ಪಾದನೆಯಾಗುವ ನೀರಿನ ಸಂಗ್ರಹಗಳನ್ನು ನಾಶ ಮಾಡಬೇಕು, ಮನೆಗಳಲ್ಲಿ ನೀರಿನ ಸಂಗ್ರಹವನ್ನು ಪದೇ ಪದೇ ಬದಲಾಯಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವಥ್ ಬಾಬು ಮಾತನಾಡಿ, ಜೂನ್ ತಿಂಗಳಲ್ಲಿ ಡೆಂಗ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿದ್ದು, 159 ಮಂದಿಯಲ್ಲಿ ಡೆಂಗ್ ಪಾಸಿಟಿವ್ ಬಂದಿದ್ದು, 49 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ. ಇದುವರೆಗೂ ಒಂದೇ ಒಂದು ಸಾವು ಆಗಿಲ್ಲ. ನಗರದ ಗೌರಿಕಾಲುವೆ, ರಾಮನಹಳ್ಳಿ, ಇಂದಾವರದಂತಹ ಗ್ರಾಮಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News