ರಾಜ್ಯದ ಕಾಂಗ್ರೆಸ್ ಸರಕಾರ ರೈತ ವಿರೋಧಿ ಸರಕಾರ: ಬಿ.ವೈ.ವಿಜಯೇಂದ್ರ

Update: 2024-01-31 17:21 GMT

ಚಿಕ್ಕಮಗಳೂರು: ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ಬೆಳೆದ ಬೆಳೆ ನಾಶವಾಗಿದೆ. ಪರಿಣಾಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ರಾಜ್ಯ ಸರಕಾರ ರೈತರ ನೆರವಿಗೆ ಬಾರದೇ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬರದ ವಿಚಾರದಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪರಿಹಾರ ನೀಡಿ ಎಂದರೇ, ಕೇಂದ್ರ ಸರಕಾರ ಕಡೆ ಬೊಟ್ಟು ಮಾಡುತ್ತಿದೆ. ರೈತರ ಪರವಾಗಿ ಮಾತನಾಡುತ್ತಿರುವ ರಾಜ್ಯ ಸರಕಾರ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ದಾವಿಸಿಲ್ಲ ಎಂದು ದೂರಿದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಬರಗಾಲವಿದ್ದರೂ ರೈತರಿಗೆ ಅನ್ಯಾಯವಾಗಬಾರದು ಎಂದು ರೈತರ ಪಂಪ್‍ಸೆಟ್‍ಗೆ ನಿರಂತರವಾಗಿ 7ಗಂಟೆ ತ್ರಿಫೇಸ್ ವಿದ್ಯುತ್ ನೀಡಿದ್ದರು. ಸಿದ್ದರಾಮಯ್ಯ ಸರಕಾರ 200 ಯೂನಿಟ್ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಾ ವಿದ್ಯುತ್ ದರ ಏರಿಕೆ ಮಾಡಿದೆ. ರೈತರ 7ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡದೇ ಮೋಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಧಾನಿ ಮೋದಿ ರೈತರ ಖಾತೆಗೆ 6ಸಾವಿರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿದ್ದಾರೆ. ಯಡಿಯೂರಪ್ಪ ಸರಕಾರ 4ಸಾವಿರ ರೂ. ಜಮೆ ಮಾಡುತ್ತಿತ್ತು. ಆದರೆ ಸಿದ್ದರಾಮಯ್ಯ ಸರಕಾರ ರೈತರಿಗೆ ನೀಡುತ್ತಿದ್ದ ಈ ಹಣವನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರಕಾರಕ್ಕೆ ರೈತರ ಪರ ಮಾತನಾಡಲು ಯೋಗ್ಯತೆ ಇದೆಯೇ? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಐವರು ಶಾಸಕರು ಗೆದ್ದಿದ್ದಾರೆ. ಆದರೆ ಈ ಶಾಸಕರು ಯಾರೆಂದು ಜನತೆಗೆ ಗೊತ್ತಿಲ್ಲ. ರಾಜ್ಯ ಸರಕಾರ ಅಭಿವೃದ್ದಿಗೆ ನಯಾಪೈಸ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಶಾಸಕರು ಹತಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಂಎಲ್‍ಎಗಳಿಂದಲೇ ಸರಕಾರ ಬಿದ್ದು ಹೋಗುತ್ತದೆ ̤ ಮುಂದಿನ ವಿಧಾನಸಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಹುಲ್‍ಗಾಂಧಿ ಕಾಲಿಟ್ಟ ಕಡೆಗಳಲ್ಲಿ ಕಮಲ ಅರಳುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News