ಸಾಮಾಜಿಕ ನ್ಯಾಯ, ಆರ್ಥಿಕ ಶಕ್ತಿ, ಶಿಕ್ಷಣಕ್ಕಾಗಿ ಪ್ರತಿರೋಧ ಅನಿವಾರ್ಯ: ನಟ ಚೇತನ್ ಅಹಿಂಸಾ

Update: 2024-03-10 18:02 GMT

ಕೊಪ್ಪ: ಆದಿವಾಸಿಗಳು, ದಲಿತರನ್ನು ಇನ್ನೂ ಕೆಳ ಮಟ್ಟದಲ್ಲಿ ಇರಿಸುವ ಕಾರ್ಯ ನಡೆಯುತ್ತಿದೆ. ಸಮಾಜದಲ್ಲಿ ಶೋಷಿತರಿಗೆ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಈ ಸಲುವಾಗಿ ಪ್ರತಿರೋಧವನ್ನು ವ್ಯಕ್ತಪಡಿಸಬೇಕು ಎಂದು ಚಲನಚಿತ್ರ ನಟ ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದಿವಾಸಿ ಸಮುದಾಯ, ಪ್ರಗತಿಪರ ಸಂಘಟನೆಗಳು ರವಿವಾರ ಪಟ್ಟಣ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರು, ಆದಿವಾಸಿಗಳು ಅನ್ಯಾಯದ ವಿರುದ್ಧ ಶಕ್ತಿಯನ್ನು ಹೊರ ಹಾಕಬೇಕು. ಅರ್ಥಿಕ, ಸಾಂಸ್ಕೃತಿಕ ವಿಚಾರಗಳನ್ನು ಸರಿಪಡಿಸಲು ಮುಂದಾಗಬೇಕು ಎಂದರು.

ಆದಿವಾಸಿಗಳು ಇಲ್ಲಿನ ಮೂಲ ನಿವಾಸಿಗಳು. ಇಂದು ಮೂಲೆಗುಂಪು ಆಗಿದ್ದಾರೆ. ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ, ಪ್ರತಿರೋಧದ ವ್ಯಕ್ತಪಡಿಸುವುದು ಅನಿವಾರ್ಯವಾಗಿದೆ. ನಮ್ಮ ಸಿದ್ಧಾಂತ ಅರ್ಥವಾಗಬೇಕಾದರೆ ಸಮಾನತೆ, ವೈಜ್ಞಾನಿಕತೆ, ನ್ಯಾಯ ಇವುಗಳು ಮುಖ್ಯ. ಸರಕಾರಗಳು ಆದಿವಾಸಿಗಳನ್ನು, ಬುಡಕಟ್ಟು ಜನರನ್ನು ಗುರುತಿಸಬೇಕು. ಈಗಿನ ಸರಕಾರ ದಲಿತರ 11 ಸಾವಿರ ಕೋಟಿ ರೂ.ಗಳನ್ನು ಅವರ ಐದು ಯೋಜನೆಗಳಿಗೆ ಬಳಸಿಕೊಂಡಿದೆ. ಇದು ದಲಿತರಿಗೆ ರಾಜ್ಯ ಸರಕಾರ ಮಾಡಿದ ಅನ್ಯಾಯ. ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಹಣವನ್ನು ಸರಕಾರ ಬೇರೆ ಯೋಜನೆಗೆ ವರ್ಗಾಹಿಸಿರುವುದು ಸರಿಯಲ್ಲ ಎಂದು ದೂರಿದರು.

ಆದಿವಾಸಿಗಳು, ದಲಿತರು ಸುಮಾರು 10 ಸಾವಿರ ವರ್ಷಗಳಿಂದ ತಮಗೆ ಆಗುತ್ತೀರುವ ಅನ್ಯಾಯದ ವಿರುದ್ಧ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ದಲಿತರನ್ನು ಉಪಯೋಗಿಸಿಕೊಂಡು ದೇಶದ ಜಿಡಿಪಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಆದಿವಾಸಿಗಳು, ದಲಿತರ ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯ, ಕೇಂದ್ರ ಸರಕಾರಗಳು ದಲಿತರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೇ, ಯಾವುದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಸರಕಾರ ತನಗೆ ಬೇಕಾದಲ್ಲಿ ವರ್ಗಾಹಿಸುತ್ತಿದೆ. ಇದು ಸರಿಯಲ್ಲ. ಆದಿವಾಸಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯ ಅವಶ್ಯಕತೆಯಿದೆ ನಟ ಚೇತನ್ ಹೇಳಿದರು.

ಅರಣ್ಯ ಕಾಯ್ದೆ, ಮೀಸಲು ಅರಣ್ಯ ಇನ್ನಿತರ ಹೆಸರಲ್ಲಿ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗುತ್ತಿದೆ. ಆದರೆ ಅರಣ್ಯ ರಕ್ಷಣೆ ಆದಿವಾಸಿ ಸಮುದಾಯದಿಂದ ಮಾತ್ರ ಸಾಧ್ಯ. ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಝೂ, ರೆಸಾರ್ಟ್, ಬಂಡವಾಳಶಾಹಿಗಳಿಗೆ ನೀಡುವ ಯೋಜನೆ ಇದೆ ಎಂದ ಚೇತನ್, ಆದಿವಾಸಿಗಳಲ್ಲಿ ಹಲವು ಜನಾಂಗಳು ಇವೆ. ಯಾವುದೋ ಒಂದು ಜನಾಂಗಕ್ಕೆ ಮಾತ್ರ ಎಲ್ಲಾ ಸೌಲಭ್ಯ ದಕ್ಕುವಂತೆ ಆಗಬಾರದು. ಎಲ್ಲಾ ಆದಿವಾಸಿಗಳಿಗೆ ಸರಕಾರದ ಸೌಲಭ್ಯ ದೊರೆಯಬೇಕು. ಕುರುಬ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕೇಂದ್ರ ಶಿಫರಾಸು ಮಾಡಿದೆ. ಆದರೆ, ಕುರುಬ ಸಮುದಾಯವನ್ನು ಎಸ್‌ಸಿ ಗೆ ಸೇರಿಸಿದಲ್ಲಿ ಎಸ್‌ಸಿ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದರು.

ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಆಶೋಕ್ ಮಾತನಾಡಿ, ಮಲೆನಾಡು ಭಾಗದಲ್ಲಿ ಗಿರಿಜನರಿಗೆ ಅರಣ್ಯ ಇಲಾಖೆಯ ಕಾಯ್ದೆಗಳು ಮಾರಕವಾಗಿದೆ. ಭೂಮಿಗಾಗಿ ನಮ್ಮ ಹೋರಾಟ ನಡೆಯುತ್ತ ಬಂದಿದೆ. ಅರಣ್ಯ ಇಲಾಖೆಯಿಂದ ತೊಂದರೇ ಆಗುತ್ತಿದೆ. ಪರಿಹಾರ ಸಿಗುವವರೆಗೂ ಹೋರಾಟ ನಡೆಸಬೇಕು. ರೈತರ ಹೋರಾಟಕ್ಕೆ ಪ್ರಧಾನಿ ಮೋದಿ ರೈತ ವಿರೋಧಿ ಕಾಯ್ದೆಯನ್ನು ಹಿಂದೆ ತೆಗೆದುಕೊಂಡಿದ್ದಾರೆ. ನಾವು ಕೂಡ ಹೋರಾಟ ಮಾಡುವ ಆಗತ್ಯವಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ದೇಶದಲ್ಲಿ ಶಿಕ್ಷಣ ಪಡೆದು ಅಸಮಾನತೆ ಕಡಿಮೆಯಾಗುತ್ತಿದೆ. ಆದರೇ, ಭಾವನಾತ್ಮಕವಾಗಿ ಮತ್ತು ಅಮಿಷಗಳಿಗೆ ಒಳಗಾಗುತ್ತೀರುವ ರಾಜಕಾರಣ ನಡೆಯುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಹೋರಾಟಗಳು ನಡೆಯಬೇಕು ಎಂದರು.

ಪರಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ಹಿಂದೂಗಳು ಅಲ್ಲ. ನಾವು ಆದಿವಾಸಿಗಳು. ದೇಶದ ರಕ್ಷಣೆಯನ್ನು ಮಾಡುತ್ತೇವೆ ಎನ್ನುವ ಆರೆಸ್ಸೆಸ್‌ನವರು ಸದ್ಯ ಆದಿವಾಸಿಗಳನ್ನು ವನವಾಸಿಗಳು ಎಂದು ಕರೆಯುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಆದಿವಾಸಿಗಳ, ಬುಡಕಟ್ಟು ಜನಾಂಗದ ಹಕ್ಕುಗಳನ್ನು ಕಿತ್ತುಕೊಳ್ಳಲು ಕಳೆದ ವರ್ಷ ಮೋದಿ ಸರಕಾರ ಕಠಿಣ ಕಾನೂನು ಜಾರಿಗೆ ತಂದಿತ್ತು. ಅದರ ವಿರುದ್ಧ ಹೋರಾಟ ನಡೆದಿತ್ತು. ಹೋರಾಟಗಾರರ ಮೇಲೆ ಇದೇ ಕಾನೂನು ಬಳಸಿ ದೌರ್ಜನ್ಯ ನಡೆಸಲಾಗುತ್ತಿದೆ. ಆದಿವಾಸಿಗಳು ಸಂಘಟಿತರಾಗಿ ಹೋರಾಡದಿದ್ದಲ್ಲಿ ನಮ್ಮಲ್ಲೂ ಇಂತಹ ದೌರ್ಜನ್ಯ ನಡೆಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಆದಿವಾಸಿ ರಕ್ಷಣಾ ಪರಿಷತ್‌ನ ಕೃಷ್ಣಪ್ಪ, ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ಮರಿಯಪ್ಪ, ಪದ್ಮಾವತಿ, ಸುರೇಶ್ ಭಟ್, ಗೌಸ್ ಮೊಯಿದ್ದೀನ್, ಜಯಂತ್, ರಾಜು ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News