ಈಶ್ವರಪ್ಪ ಅವರೊಂದಿಗೆ ಪಕ್ಷದ ಹಿರಿಯರು ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುತ್ತಾರೆ: ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು: ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಎರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುತ್ತದೆ. ಹಿರಿಯ ನಾಯಕರು ಈಶ್ವರಪ್ಪ ಜೊತೆ ಮಾತುಕತೆ ನಡೆಸುತ್ತಾರೆ ಎಂದು ಉಡುಪಿ-ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅಭ್ಯರ್ಥಿ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಅವರು ಶನಿವಾರ ಬೆಳಗ್ಗೆ ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರು, "ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲ ಗೊಂದಲಗಳು ಬಗೆಹರಿಯುತ್ತೆ ಎಂಬ ವಿಶ್ವಾಸ ಇದೆ. ಈಶ್ವರಪ್ಪ ಅವರ ವಿಚಾರದಲ್ಲಿ ವ್ಯಾಪಕ ಚರ್ಚೆಗೆ ಅವಕಾಶ ವಾಗಿರುವುದು ಸತ್ಯ. ಹಾವೇರಿ ಟಿಕೆಟ್ ಕಾಂತೇಶ್ ಗೆ ನೀಡಬೇಕಿತ್ತು ಎಂಬುದು ಈಶ್ವರಪ್ಪನವರ ಬಯಕೆಯಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕಾಗುತ್ತದೆ. ಎಲ್ಲವನ್ನು ಸಮನ್ವಯವಾಗಿಸಿಕೊಂಡು ಹೋಗುವುದು ಪಕ್ಷದ ಜವಾಬ್ದಾರಿ. ಪಾರ್ಟಿ ತೀರ್ಮಾನ ತೆಗೆದುಕೊಳ್ಳುವಾಗ ವ್ಯತ್ಯಾಸವಾಗಿರಬಹುದು. ಈ ಸಮಸ್ಯೆಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.