ಚಿಕ್ಕಮಗಳೂರು | ಪ್ರವಾಸಕ್ಕೆ ಬಂದಿದ್ದ ಪೇದೆ, ಕುಟುಂಬಸ್ಥರ ಮೇಲೆ ಹಲ್ಲೆ ಆರೋಪ ; ಓರ್ವ ಬಂಧನ
ಚಿಕ್ಕಮಗಳೂರು : ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಬೆಂಗಳೂರು ಮೂಲದ ಪೊಲೀಸ್ ಪೇದೆ ಮೇಲೆ ದೇಗುಲದ ಮುಂಭಾಗ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಪ್ರಕರಣದ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮೇ 26ರಂದು ರಾತ್ರಿ 12:30ಕ್ಕೆ ಬೆಂಗಳೂರು ರಾಜಗೋಪಾಲನಗರ ಠಾಣೆ ಪೊಲೀಸ್ ಪೇದೆ ರಾಜೇಗೌಡ ಅವರು ಪತ್ನಿ ಕುಸುಮಾ ಹಾಗೂ ಅಣ್ಣ ಅತ್ತಿಗೆಯೊಂದಿಗೆ ಶೃಂಗೇರಿ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನದ ಮುಂಭಾಗದಲ್ಲಿ ಕಾರು ನಿಲ್ಲಿಸಿದಾಗ ಪೇದೆ ರಾಜೇಗೌಡ ಮೇಲೆ ಆರೋಪಿ ಸ್ಪರ್ಶಿತ್ ಎಂಬಾತ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಪೇದೆ ರಾಜೇಗೌಡ ಮತ್ತು ಅವರ ಕುಟುಂಬಸ್ಥರು ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದರು. ಈ ವೇಳೆ ರಾತ್ರಿ 12:30ರ ಸುಮಾರಿಗೆ ಪೇದೆಯ ಅಣ್ಣ-ಅತ್ತಿಗೆ ಉಳಿಯಲು ಲಾಡ್ಜ್ ಕೇಳಲು ಹೋಗಿದ್ದರು. ಆಗ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ದೇವಾಲಯದ ಮುಂಭಾಗದಲ್ಲಿದ್ದ ಮತ್ತಿಬ್ಬರು ದೇವಸ್ಥಾನದ ಮುಂಭಾಗ ಇದ್ದ ಕಾರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸ್ಪರ್ಶಿತ್ ಎಂಬಾತ ಪೇದೆ ಮೇಲೆ ಹಲ್ಲೆ ಮಾಡಿದ್ದು, ಗಲಾಟೆ ತಾರಕಕ್ಕೇರಿದಾಗ ಕಬ್ಬಿಣದ ರಾಡ್‍ನಿಂದ ಪೇದೆ ರಾಜೇಗೌಡ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಗಲಾಟೆ ಬಿಡಿಸಲು ಬಂದ ಪೇದೆ ಅಣ್ಣ ಉಮೇಶ್ ಮೇಲೂ ಹಲ್ಲೆ ನಡೆಸಲಾಗಿದೆ. ಪೇದೆ ರಾಜೇಗೌಡ ಮತ್ತು ಉಮೇಶ್ ಇಬ್ಬರ ಕೈಗೆ ಗಂಭೀರ ಗಾಯವಾಗಿದ್ದು, ಹಲ್ಲೆ ನಡೆಸಿದ್ದಲ್ಲದೆ ಸ್ಪರ್ಶಿತ್ ಮತ್ತು ಸಹಚರರು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಪೇದೆ ರಾಜೇಗೌಡ ಅವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪಿ ಬಂಧನ: ಕಾರು ಪಾರ್ಕಿಂಗ್ ವಿಷಯಕ್ಕೆ ಬೆಂಗಳೂರು ರಾಜಗೋಪಾಲನಗರ ಪೊಲೀಸ್ ಠಾಣೆ ಪೇದೆ ರಾಜೇಗೌಡ ಮೇಲೆ ಹಲ್ಲೆ ನಡೆಸಿದ ಶೃಂಗೇರಿ ಪಟ್ಟಣದ ಸ್ಪರ್ಶಿತ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.