ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ : ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಸೋಮವಾರವೂ ಮುದುವರಿದಿದೆ. ಮಲೆನಾಡು ಭಾಗದಲ್ಲಿ ನಿರಂತರವಾಗಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಬಯಲು ಭಾಗದಲ್ಲಿ ಮೋಡಕವಿದ ವಾತಾವರಣ ಹಾಗೂ ಸಾಧಾರಣ ಮಳೆಯಾಗುತ್ತಿದ್ದರೇ, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಲೆನಾಡು ಭಾಗದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ಭಾರೀ ಮಳೆಯಾಗಿದ್ದು, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಪ್ರಮುಖ ನದಿಗಳಲ್ಲಿ ನೀರಿನ ಹರಿವೂ ಏರಿಕೆಯಾಗಿದ್ದು, ಜಡಿಮಳೆಯಿಂದಾಗಿ ಕಾರ್ಮಿಕರು ತೋಟ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯ ಜತೆಗೆ ಗಾಳಿ ಬೀಸುತ್ತಿದ್ದು, ಮರ, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮೀಣ ಭಾಗದ ಅಲ್ಲಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿದ್ದು, ವಿದ್ಯುತ್ ವ್ಯತ್ಯಯವಾಗಿದೆ.
ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು, ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜತೆಗೆ ತಣ್ಣನೇ ಗಾಳಿ, ಗುಡುಗು ಸಿಡಿಲು ಅಬ್ಬರಿಸುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಕಂಗೆಟ್ಟಿದ್ದಾರೆ. ಮಳೆಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಉತ್ತಮ ಮಳೆ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಮಲೆನಾಡು ಭಾಗದಲ್ಲಿ ಮಳೆ ಬಿರುಸುಗೊಂಡ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರು ಕೊಳೆ ರೋಗ ನಿಯಂತ್ರಣ ಔಷಧ ಸಿಂಪಡಣೆ ಮುಂದಾಗಿದ್ದಾರೆ. ಭತ್ತ ಬೆಳೆಯ ಸಸಿ ಮಡಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಒಟ್ಟಾರೆ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದರೂ ಭಾರೀ ಮಳೆಗೆ ಕೃಷಿ ಕಾರ್ಮಿಕರು ತೋಟ ಕೆಲಸಕ್ಕೆ ಮುಂದಾಗಲು ಹಿಂದೇಟು ಹಾಕುತ್ತಿದ್ದಾರೆ.
ಮಲೆನಾಡಿನ ಕೆಲವು ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು, ಮಳೆಯ ಆರ್ಭಟಕ್ಕೆ ರಸ್ತೆ ಬದಿಯ ಮರಗಳು ಧರೆಗುರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿದ್ಯುತ್ ಕಂಬ ಹಾಗೂ ತಂತಿ ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗ್ರಾಮೀಣ ಪ್ರದೇಶದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆರೆಕಟ್ಟೆ ಹಳ್ಳಕೊಳ್ಳಗಳಲ್ಲಿನ ನೀರಿನ ಮಟ್ಟ ಹೆಚ್ಚುತ್ತಿದೆ.