ಚಿಕ್ಕಮಗಳೂರು | ಪ್ರವಾಸಿಗರಿಂದ ಸ್ಥಳೀಯರ ಮೇಲೆ ಹಲ್ಲೆ : ನಾಲ್ವರ ಬಂಧನ
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಸದ್ಯ ಭಾರೀ ಮಳೆಯ ಕಾರಣದಿಂದಾಗಿ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಹೊಸ ಮೆರುಗು ಬಂದಿದೆ. ಹಚ್ಚಹಸಿರಿನ ಗಿರಿಶ್ರೇಣಿಗಳ ಆಕರ್ಷಕರ ಸೊಬಗು, ಝರಿ ಜಲಪಾತುಗಳು ಮೈದುಂಬಿ ಹರಿಯುವ ದೃಶ್ಯಕಾವ್ಯದಂತಹ ಪರಿಸರಕ್ಕೆ ಪ್ರವಾಸಿಗರು ಮಂತ್ರಮುಗ್ಧರಾಗುತ್ತಿದ್ದಾರೆ. ಈ ಕಾರಣಕ್ಕೆ ಜಿಲ್ಲೆಗೆ ಸದ್ಯ ಪ್ರವಾಸಿಗರು ಸಾಗರೋಪಾದಿಯಲ್ಲಿ ಬರಲಾರಂಭಿಸಿದ್ದು, ಹೀಗೆ ಬರುವ ಪ್ರವಾಸಿಗರ ಪೈಕಿ ಕೆಲವರು ಕಿಡಿಗೇಡತನ ಮೆರೆಯುತ್ತಿದ್ದಾರೆ.
ಶುಕ್ರವಾರ ಸಂಜೆ ಚಾರ್ಮಾಡಿ ಘಾಟ್ ವೀಕ್ಷಣೆಗೆ ಬಂದಿದ್ದ ಕೆಲ ಪ್ರವಾಸಿಗರು ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ನಲ್ಲಿ ಬಂದಿದ್ದ ಆರೀಫ್ ಎಂಬ ಸಮಾಜ ಸೇವಕನ ಮೇಲೆ ಮದ್ಯಪಾನ ಮಾಡಿದ್ದ ಕಿಡಿಗೇಡಿಗಳು ಪೊಲೀಸರ ಎದುರೇ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ನಾಲ್ವರನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ವಿಜಯ್, ಸತ್ಯ, ಶಿವು, ಪುನೀತ್ ಕುಮಾರ್ ಬಂಧನಕ್ಕೊಳಗಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿ ಆರಂಭದಲ್ಲಿನ ತೇಜಸ್ವಿ ಪ್ರತಿಷ್ಠಾನದ ಸಮೀಪ ನಿಂತಿದ್ದ ಕಾರಿಗೆ ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಬೆಂಗಳೂರು ಮೂಲದ ಪ್ರವಾಸಿಗರಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.
ಸುದ್ದಿ ತಿಳಿದು ಸ್ಥಳದಲ್ಲಿದ್ದ ಸ್ಥಳೀಯರು ಆಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಪ್ರವಾಸಿಗರ ಗುಂಪು ಪೊಲೀಸರ ಎದುರೇ ಸ್ಥಳೀಯರು ಮತ್ತು ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆಎನ್ನಲಾಗಿದೆ. ಆಂಬ್ಯುಲೆನ್ಸ್ ಚಾಲಕ ಆರಿಫ್ ಅವರು ಎದೆ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಿರುವ ಪಾನಮತ್ತ ಪ್ರವಾಸಿಗರ ವಿರುದ್ಧ ಬಣಕಲ್ ಠಾಣೆಯಲ್ಲಿ ಮೂರು ಪ್ರಕರಣ(ಪಾನಮತ್ತ ಚಾಲನೆ,ಬೀದಿ ಜಗಳ, ಸಾರ್ವಜನಿಕರಿಗೆ ತೊಂದರೆ) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.