ರಾಮಮಂದಿರ ಉದ್ಘಾಟನೆ ಮಾಡುತ್ತಿರುವುದು ಜಗದ್ಗುರುಗಳಲ್ಲ, ವಿಶ್ವಗುರು: ಬಿ.ಕೆ ಹರಿಪ್ರಸಾದ್
ಚಿಕ್ಕಮಗಳೂರು: ಯಾವುದೇ ದೇವರ ಕಾರ್ಯಕ್ರಮಕ್ಕೆ ಆಮಂತ್ರಣದ ಅಗತ್ಯವಿಲ್ಲ. ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೂ ಆಮಂತ್ರಣದ ಅಗತ್ಯವಿಲ್ಲ. ಆದರೆ, ಅಲ್ಲಿರುವುದು ಜಗದ್ಗುರು ಅಲ್ಲ ವಿಶ್ವಗುರು. ವಿಶ್ವಗುರು ಏನೆಂದು ದೇಶದ ಜನತೆಗೆ ಗೊತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ರವಿವಾರ ನಗರಕ್ಕೆ ಆಗಮಿಸಿದ್ದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗಿನಿಂದ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಕೇಳಿದ್ದೇವೆ. ಶಂಕರಾಚಾರ್ಯ ಅವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೇ, ನಮಗೆ ಆಮಂತ್ರಣವೇ ಬೇಡವಾಗಿತ್ತು. ಆದರೆ ಅವರು ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಿಲ್ಲ. ಅಲ್ಲಿಗೆ ಹೋಗಿರುವುದು ವಿಶ್ವಗುರು. ವಿಶ್ವಗುರು ಜಗದ್ಗುರು ಆಗಲು ಸಾಧ್ಯವಿಲ್ಲ ಎಂದರು.
ನಾಲ್ಕು ಶಂಕರಾಚಾರ್ಯ ಮಠಗಳಲ್ಲಿ ಇಬ್ಬರು ವಿರುದ್ಧ, ಇಬ್ಬರು ತಟಸ್ಥವಾಗಿದ್ದಾರೆ. ಬಿಜೆಪಿ ಪಕ್ಷದ ವಿಶ್ವಗುರು ನಡೆಸುತ್ತಿರುವ ಕಾರ್ಯಕ್ರಮ ಅದು. ಆ ಕಾರ್ಯಕ್ರಮಕ್ಕೆ ಆಮಂತ್ರಣ ಕೊಡುವುದಕ್ಕೆ ಇವರ್ಯಾರು. ರಾಮ ಪೋನ್ ಮಾಡಿ ಹೇಳಿದ್ದನಾ?, ಶಂಕರಾಚಾರ್ಯರು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರೇ ನಮ್ಮಗೆ ಆಮಂತ್ರಣ ಬೇಡವಾಗಿತ್ತು ಎಂದ ಅವರು, ದೇಶದಲ್ಲಿ 33 ಕೋಟಿ ದೇವರಿದೆ. ಎಲ್ಲಾದರೂ ಹೋಗುತ್ತೇವೆ. ಇಂತಹ ದೇವರ ಬಳಿ ಹೋಗಬೇಕು ಎಂದೇನಿಲ್ಲ. ನಾವು ಭೂತ ಪೂಜೆ ಮಾಡುವವರು, ಭೂತದ ಬಳಿ ಹೋಗುತ್ತೇವೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರಕಾರದ ಮೇಲೆ ತಮ್ಮ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿಯಲ್ಲ. ಅಧಿಕಾರಕ್ಕಾಗಿ ಬೇರೆ ಬೇರೆ ಪಕ್ಷಗಳನ್ನು ಬದಲಾವಣೆ ಮಾಡಿದವನೂ ಅಲ್ಲ. ಕೆಲವರು ಕಾಂಗ್ರೆಸ್ ನಮ್ಮದು ಎನ್ನುತ್ತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನ. ಸಮಾಧಾನವಿದೆ. ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಮೇಲೆ ನನಗೆ ಯಾವುದೇ ಸಿಟ್ಟಿಲ್ಲ ಎಂದರು.
ನಿಗಮ ಮಂಡಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನು ಸರಕಾರದ ಬಳಿಯೇ ಕೇಳಬೇಕು. ನಾನು ಸರಕಾರದಿಂದ ಹೊರಗಿದ್ದೇನೆ. ಯಾವ ಮಾನದಂಡದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡಿದ್ದಾರೆಯೋ ನನಗೆ ಗೊತ್ತಿಲ್ಲ. ಮುಂದಾಗುವುದು ನನಗೆ ಗೊತ್ತಿಲ್ಲ ಎಂದರು.