ಮಂದಿರ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದನ್ನು ಖಂಡಿಸಿ ಸಿಪಿಐ (ಎಂಎಲ್‍)ನಿಂದ ಪ್ರತಿಭಟನೆ

Update: 2024-01-22 16:49 GMT

ಮೂಡಿಗೆರೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿರುವುದನ್ನು ಸಿಪಿಐಎಂಎಲ್ ಜಿಲ್ಲಾ ಸಮಿತಿ ವಿರೋಧಿಸುತ್ತದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.

ಸೋಮವಾರ ಪಕ್ಷದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಒಂದು ಸ್ವಾತಂತ್ರ್ಯ ಸಾರ್ವಭೌಮ ಜಾತ್ಯತೀತ ಸಮಾಜವಾದಿ ಆಶಯಗಳನ್ನು ಹೊಂದಿರುವ ದೇಶವಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಾದ ಸರಕಾರಗಳು ಒಂದು ಧರ್ಮದ ವಕಾಲತ್ತು ವಹಿಸುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಈಗಾಗಲೇ ನಿರುದ್ಯೋಗ, ಹಸಿವು, ಬಡತನ, ರೈತ, ಕಾರ್ಮಿಕರ ಸಮಸ್ಯೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬದುಕು ಹೀನಾಯವಾಗಿದೆ. ಜನರ ಸಮಸ್ಯೆ ಬಗೆಹರಿಸದೇ ಜನರಿಂದ ಸಂಗ್ರಹಿಸಿದ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟಲು ಬಳಸಿರುವುದು ಮಾನವ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ದೂರಿದರು.

ಈಗಾಗಲೇ ಜನರ ಸಂಕಷ್ಟದ ಜತೆಗೆ ಲಾರಿ, ಟ್ಯಾಕ್ಷಿ ಚಾಲಕರ ವಿರೋಧಿ ವಿಧೇಯಕವನ್ನು ಮಂಡಿಸುವ ಮೂಲಕ ಸಂಪೂರ್ಣ ಕಾರ್ಮಿಕ ವರ್ಗವನ್ನು ಧಮನಿಸುತ್ತಿರುವ ಕೇಂದ್ರ ಸರಕಾರ, ಮುಂಬರುವ ಲೋಕಸಭೆ ಚುನಾವಣೆ ಲಾಭಕ್ಕಾಗಿ ಅಪೂರ್ಣಗೊಂಡಿರುವ ಶ್ರೀರಾಮ ಮಂದಿರವನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮ ದೇಶದ, ಸರಕಾರದ ಕಾರ್ಯಕ್ರಮವೆಂದು ಬಿಂಬಿಸುತ್ತಿರುವುದು ವಿಷಾಧನೀಯ. ಕೂಡಲೇ ಜಾತಿ ಗಣತಿಯನ್ನು ಆರಂಭಿಸಬೇಕು. ಲಾರಿ ಟ್ರಕ್ ಚಾಲಕರ ವಿಧೇಯಕ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಬಳಿಕ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ಎಸ್.ಶೇಖರ್, ರೈತ ಸಂಘದ ಅಧ್ಯಕ್ಷ ಶಂಕರ್, ಗೋಣಿಬೀಡು ಗ್ರಾ.ಪಂ. ಸದಸ್ಯ ಬಿ.ಕೃಷ್ಣ, ವಿಠಲ್, ಮಂಜು, ಶೇಖರ್, ಸುರೇಶ್ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News