ಚಿಕ್ಕಮಗಳೂರು: ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ರೌಡಿಶೀಟರ್ ಆಸ್ಪತ್ರೆಯಿಂದ ಪರಾರಿ

Update: 2024-01-13 14:27 GMT

ಆರೋಪಿ ಪೂರ್ಣೇಶ್ 

ಚಿಕ್ಕಮಗಳೂರು: ಕೊಲೆಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ, ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ಓರ್ವ ಇತ್ತೀಚೆಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಶುಕ್ರವಾರ ಮುಂಜಾನೆ ನಗರದಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿಯ ಮಾಗಲು ಗ್ರಾಮದ ನಿವಾಸಿ ಪೂರ್ಣೇಶ್ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿರುವ ರೌಡಿಶೀಟರ್ ಆಗಿದ್ದು, ಗುಂಟೇಟಿನಿಂದ ಗಾಯಗೊಂಡಿದ್ದ ಆರೋಪಿಗೆ ಚಿಕಿತ್ಸೆ ಕೊಡಿಸಲು ಪೊಲೀಸರು ಆರೋಪಿಯನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಪೂರ್ಣೇಶ್ ಇತ್ತೀಚೆಗೆ ಕೊಂಚ ಚೇತರಿಸಿಕೊಂಡಿದ್ದ. ಶುಕ್ರವಾರ ಮುಂಜಾನೆ ಪೊಲೀಸರ ಭದ್ರತೆಯಲ್ಲೇ ಆಸ್ಪತ್ರೆಯಲ್ಲಿದ್ದ ಪೂರ್ಣೇಶ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆಂದು ತಿಳಿದು ಬಂದಿದೆ.

ಪೂಣೇಶ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 3 ಕೊಲೆ ಯತ್ನ ಪ್ರಕರಣ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಕೊಲೆ ಯತ್ನ ನಡೆಸಿದ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಆರೋಪಿ ಪೂಣೇಶ್ ತನ್ನ ಮನೆ ಸಮೀಪದ ಕಾಡನ್ನೇ ಅಡಗುದಾಣ ಮಾಡಿಕೊಂಡು ಯಾರ ಕಣ್ಣಿಗೂ ಬೀಳದಂತೆ ತಲೆ ಮರೆಸಿಕೊಂಡಿದ್ದ. ಕಾಡಿನಲ್ಲಿ ರಾತ್ರಿ ವೇಳೆ ಮರದ ಕೊಂಬೆಗಳ ಮೇಲೆ ಮಲಗುತ್ತಿದ್ದ. ಆಗಾಗ್ಗೆ ತನ್ನ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರೂ ಅನೇಕ ವರ್ಷಗಳಿಂದ ಪೊಲೀಸರ ಕಣ್ಣಿಗೆ ಬೀಳದೇ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.

ಇತ್ತೀಚೆಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಾಗಲು ಗ್ರಾಮದಲ್ಲಿದ್ದ ಆತನ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೂಣೇಶ್ ಮನೆಯಲ್ಲೇ ಇದ್ದ. ಈ ವೇಳೆ ಪೊಲೀಸರು ಶರಣಾಗುವಂತೆ ಸೂಚನೆ ನೀಡಿದರೂ ಅದನ್ನು ಧಿಕ್ಕರಿಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ಪೂಣೇಶ್ ಕಾಲಿಗೆ ಗುಂಡೇಟು ಬಿದ್ದ ಪರಿಣಾಮ ಓಡಲಾಗದೇ ನೆಲಕ್ಕೆ ಬಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದರು.

ಗುಂಡೇಟಿನಿಂದ ಪೂರ್ಣೇಶ್ ಕಾಲಿಗೆ ಗಾಯವಾಗಿದ್ದರಿಂದ ಆತನನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಇತ್ತೀಚೆಗೆ ಕೊಂಚ ಗುಣಮುಖನಾಗಿದ್ದು, ಶುಕ್ರವಾರ ನಸುಕಿನ ವೇಳೆಯಲ್ಲಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈತನ ಸುಳಿವು ಪತ್ತೆಯಾದಲ್ಲಿ 9480805100, 8277991000, 08266: 250666 ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News