ಸಂಘ ಪರಿವಾರದ ಕಾರ್ಯಕರ್ತರ ಧರಣಿ ಪ್ರಕರಣ: ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದ ಐವರ ವಿರುದ್ಧ ಎಫ್‍ಐಆರ್

Update: 2024-01-23 17:40 GMT

ಚಿಕ್ಕಮಗಳೂರು: ದತ್ತಪೀಠದಲ್ಲಿ ತಾರಕ ಹೋಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಸೋಮವಾರ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಧರಣಿ ನಡೆಸಿದ್ದಲ್ಲದೇ ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದ ಘಟನೆ ಸಂಬಂಧ ನಗರ ಠಾಣೆ ಪೊಲೀಸರು ಸಂಘ ಪರಿವಾರದ 5 ಮಂದಿ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ಆದೇಶಿಸಿದ್ದು, ಮುಜರಾಯಿ ಇಲಾಖೆ ಅಧೀನದ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ತಾರಕ ಹೋಮ ನಡೆಸಲು ಸಂಘ ಪರಿವಾರದ ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಆದರೆ ಹೋಮಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಬಜರಂಗದಳ, ವಿಶ್ವಹಿಂದೂ ಪರಿಷತ್‍ನ ಮುಖಂಡರು, ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಧರಣಿ ನಡೆಸಿದ್ದರು. ಈ ವೇಳೆ ಹೋಮ ಕುಂಡ ನಿರ್ಮಿಸಿ ಅಣಕು ಹೋಮವನ್ನೂ ನಡೆಸಿದ್ದರು ಎನ್ನಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಗೆ ಅವಕಾಶವಿಲ್ಲ ಎಂದು ಹೇಳಿ ಧರಣಿ ಕೈಬಿಡಲು ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ಸಂಘಪರಿವಾರದ ಮುಖಂಡರು, ಕಾರ್ಯಕರ್ತರು ದತ್ತಪೀಠ ಚಲೋ ನಡೆಸಿ ಹೋಮ ಮಾಡಿಯೇ ತೀರುತ್ತೇವೆ ಎಂದು ಎಚ್ಚರಿಸಿ ದತ್ತಪೀಠಕ್ಕೆ ತೆರಳಲು ಮುಂದಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಪೊಲೀಸರ ಭದ್ರತೆ ಬೇಧಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ್ದರು. ಸಂಘ ಪರಿವಾರದ ಈ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೊಲೀಸರು ಎಲ್ಲ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧನದ ವೇಳೆ ಸ್ಥಳದಲ್ಲಿದ್ದ ಎಸ್ಪಿ ಡಾ.ವಿಕ್ರಮ್ ಅಮಟೆ ಅವರನ್ನೂ ಧರಣಿ ನಿರತರು ಎಳೆದಾಡಿದ್ದರು ಎನ್ನಲಾಗಿದೆ.

ಸಂಘ ಪರಿವಾರ ನಡೆಸಿದ ಧರಣಿ ವೇಳೆ ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದ ಘಟನೆ ಸಂಬಂಧ ಉಪವಿಭಾಗಾಧಿಕಾರಿ ದಲ್ಜಿತ್‍ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ ಕೂಟ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿ ಆತಂಕ ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದವರ ಹೆಸರುಗಳನ್ನು ವಿಡಿಯೋ ಪರಿಶೀಲನೆ ಬಳಿಕ ತಿಳಿಸುವುದಾಗಿ ತಿಳಿಸಲಾಗಿದೆ. ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ನೀಡಿದ ದೂರು ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಸಂಘಪರಿವಾರದ 5 ಮಂದಿ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News