ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶೃಂಗೇರಿ ಸ್ವಾಮೀಜಿ ಭಾಗವಹಿಸುವುದಿಲ್ಲ: ಮಠದ ಪ್ರಕಟನೆಯಲ್ಲಿ ಸ್ಪಷ್ಟನೆ

Update: 2024-01-18 17:15 GMT

ಅಯೋಧ್ಯೆಯ ರಾಮಮಂದಿರ | PTI 

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಜ.22 ರಂದು ನಡೆಯುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶೃಂಗೇರಿ ಶಂಕರಾಚಾರ್ಯ ಮಠದ ಜಗದ್ಗುರುಗಳು ಭಾಗವಹಿಸುವುದಿಲ್ಲ. ಕಾರ್ಯಕ್ರಮದಲ್ಲಿ ಮಠದ ಪ್ರತಿನಿಧಿಯಾಗಿ ಆಡಳಿತಾಧಿಕಾರಿ ಮಾತ್ರ ಭಾಗವಹಿಸಲಿದ್ದಾರೆ ಎಂದು ಶೃಂಗೇರಿ ಮಠದ ಪ್ರಕಟನೆ ತಿಳಿಸಿದೆ.

ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶೃಂಗೇರಿ ಶಂಕರಾಚಾರ್ಯ ಭಾವಚಿತ್ರ ಬಳಸಿಕೊಂಡು ಶೃಂಗೇರಿ ಮಠದ ಜಗದ್ಗುರುಗಳು ಭಾಗವಹಿಸಲಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದರಲ್ಲಿ ಸುದ್ದಿ ಪ್ರಕಟಿಸಿದೆ. ಈ ಸುದ್ದಿಯಲ್ಲಿ ಶಿವಮೊಗ್ಗ ನಗರ ಸಮೀಪದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಕುದಳಿ ಮಠವನ್ನೇ ಶೃಂಗೇರಿ ಮಠ ಎಂದು ಬಿಂಬಿಸಲಾಗಿದೆ. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಕುದಳಿ ಮಠ ಶೃಂಗೇರಿ ಮಠದ ಶಾಖೆಯಾಗಿದ್ದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮಠವಾಗಿದೆ. ಕುದಳಿ ಮಠ ದಕ್ಷಿಣಮ್ನಾಯ ಶಾರದ ಮಠ ಅಲ್ಲವೂ ಅಲ್ಲ, ಶೃಂಗೇರಿ ಮಠವೂ ಅಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಜ.22ರಂದು ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಕಿರಿಯ ಜಗದ್ಗುರು  ವಿಧುಶೇಖರ ಭಾರತೀ ಸ್ವಾಮೀಜಿ ಭಾಗವಹಿಸುತ್ತಿಲ್ಲ. ಶೃಂಗೇರಿ ಮಠದ ಪ್ರತಿನಿಧಿಯಾಗಿ ಮಠದ ಆಡಳಿತಾಧಿಕಾರಿಯಾಗಿರುವ ವಿ.ಆರ್.ಗೌರಿಶಂಕರ್ ಅವರು ಮಾತ್ರ ಭಾಗವಹಿಸಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದು, ಮಠದ ಭಕ್ತರು, ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಲಾಗಿದೆ.

ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಹಿನ್ನೆಯಲ್ಲಿ ಜಗದ್ಗುರು ಶಂಕರಾಚಾರ್ಯ ಅವರು ರಚಿಸಿರುವ ಶ್ರೀರಾಮ ತಾರಕ ಮಂತ್ರ ಹಾಗೂ ರಾಮ ಭುಜಂಗ ಸ್ತೋತ್ರವನ್ನು ಭಕ್ತರು ಪಠಿಸುವ ಮೂಲಕ ಶ್ರೀರಾಮನ ಅನುಗ್ರಹ ಪಡೆಯಬೇಕೆಂಬ ಪ್ರಕಟನೆಯನ್ನು ಮಾತ್ರ ಈ ಹಿಂದೆ ಮಠದ ವತಿಯಿಂದ ಹೊರಡಿಸಲಾಗಿದೆ ಎಂದು ಮಠದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News