ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Update: 2024-09-21 17:14 GMT

ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಪರದಾಡುತ್ತಿದೆ. ಇದಕ್ಕಾಗಿ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.

ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 50,000 ಬಿಪಿಎಲ್ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ ಸರಕಾರ ಸಮೀಕ್ಷೆಯನ್ನು ಸಹ ನಡೆಸುತ್ತಿದೆ. ಸಾವಿರಾರು ಬಡ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮಹಿಳಾ ಮೋರ್ಚ ಅಥವಾ ಬೇರೆ ಯಾವುದಾದರೂ ಘಟಕದಿಂದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕು ಎಂದರು.

ಇದರಿಂದ ಕನಿಷ್ಠಪಕ್ಷ ಬಿಪಿಎಲ್ ಕಾರ್ಡುಗಳಿಗೆ ಸ್ವಲ್ಪಮಟ್ಟಿನ ರಿಯಾಯಿತಿಯಾದರೂ ಸಿಗಬಹುದು. ಬಡವರಿಗೆ ಅನುಕೂಲವಾಗಬಹುದು ಎಂದ ಅವರು, ಇಡೀ ದೇಶದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ನಮ್ಮ ನಮ್ಮ ಬೂತ್ ಗಳಲ್ಲಿ ಅಭಿಯಾನಕ್ಕೆ ವೇಗ ನೀಡಬೇಕು. ಕೆಲವೆಡೆ ತುಂಬಾ ಚೆನ್ನಾಗಿ ನಡೆದಿದೆ. ಪ್ರಮುಖವಾಗಿ ಮಹಾಶಕ್ತಿ ಕೇಂದ್ರಗಳು, ಮಂಡಲಗಳಲ್ಲಿ ಇನ್ನಷ್ಟು ಚುರುಕಾಗಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ ಎಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸದಸ್ಯತ್ವ ಅಭಿಯಾನ ಕೇವಲ ಸಂಖ್ಯಾತ್ಮಕವಾಗಿ ಆದರೆ ಸಾಲದು. ಅದು ಗುಣಾತ್ಮಕವಾಗಿರಬೇಕು. ಕೇವಲ ತಾಂತ್ರಿಕವಾಗಿ ಸದಸ್ಯರಾದರೆ ಸಾಕಾಗುವುದಿಲ್ಲ. ಪಕ್ಷದೊಂದಿಗೆ ನೂತನ ಸದಸ್ಯರನ್ನು ಭಾವನಾತ್ಮಕವಾಗಿ ಬೆರೆತುಕೊಳ್ಳುವಂತೆ ಮಾಡಬೇಕು. ಅಂತವರನ್ನೇ ಸದಸ್ಯರನ್ನಾಗಿ ನೋಂದಾಯಿಸಬೇಕು. ಯಾವ ಕಾರಣಕ್ಕೆ ಸದಸ್ಯತ್ವ ತೆಗೆದುಕೊಂಡಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ನೂತನವಾಗಿ ಸದಸ್ಯತ್ವ ಪಡೆಯುವವರಿಗೆ ಕೇಂದ್ರದ ನಾಯಕತ್ವ, ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ವರಾಜ್ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಬೆಳವಾಡಿ ರವೀಂದ್ರ, ಮುಖಂಡರಾದ ಪ್ರೇಮ್ ಕುಮಾರ್, ಬಿ.ರಾಜಪ್ಪ, ಜಸಂತಾಅನಿಲ್ ಕುಮಾರ್, ಪವಿತ್ರಾ, ಸಂತೋಷ್ ಕೋಟ್ಯಾನ್, ಬಸವರಾಜ್, ಜಿ.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News