ದೇಶ ಆಳುತ್ತಿರುವ ಸರಕಾರವು ಪ್ರಶ್ನಿಸುವವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟುತ್ತಿದೆ : ನಟ ಪ್ರಕಾಶ್ ರಾಜ್
ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಗೆ ಅವಕಾಶವೇ ಇರಬಾರದು. ಇಂತಹ ಸರ್ವಾಧಿಕಾರಿ ಸರಕಾರ ದೇಶಕ್ಕೆ ಅಪಾಯಕಾರಿ. ಕಳೆದ 10 ವರ್ಷಗಳಿಂದ ದೇಶದಲ್ಲಿ ಸರ್ವಾಧಿಕಾರಿ ಸರಕಾರ ಇದ್ದು, ಈ ಸರಕಾರ ಪ್ರಶ್ನಿಸುವವರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುತ್ತಿದೆ ಎಂದು ಎಂದು ಚಲನಚಿತ್ರ ನಟ, ವಾಗ್ಮಿ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದಲ್ಲಿ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಂಗಳ ಅಥಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸರ್ವಾಧಿಕಾರಿ ಸರಕಾರವನ್ನು ಮನೆಗೆ ಕಳಿಸುವ ಕೆಲಸವನ್ನು ಮತದಾರರು ಮಾಡಬೇಕು. ಜನರು ಎಚ್ಚೆತ್ತುಕೊಂಡು ವಿವೇಚನೆಯಿಂದ ತಮ್ಮ ಹಕ್ಕು ಚಲಾಯಿಸಬೇಕು. ಅಧಿಕಾರ ಎನ್ನುವುದು ಆಳುವವರ ಕೈಯಲ್ಲಿರುವುದಲ್ಲ, ಅದು ಆಯ್ಕೆ ಮಾಡುವವರ ಕೈಯಲ್ಲಿರಬೇಕು. ಆದರೆ ಕಳೆದ 10 ವರ್ಷಗಳಿಂದ ಅಧಿಕಾರ ಆಳುವವರ ಕೈಯ್ಯಲಿದ್ದು, ಅಧಿಕಾರ ಮತದಾರರ ಕೈಗೆ ಬರಬೇಕು. ಇದು ಸಾಕಾರವಾಗಲು ಪರಿವಾರ ನಾಯಕರ ಕುಟುಂಬ ರಾಜಕೀಯಕ್ಕೆ ಇತಿಶ್ರೀ ಹಾಡುವ ಕೆಲಸವನ್ನು ಮತದಾರರು ಮಾಡಬೇಕು" ಎಂದು ಹೇಳಿದರು.
"ದೇಶವನ್ನು ಮಾನವತಾವಾದಿಗಳು, ಪ್ರಜ್ಞಾವಂತರ ಕೈಗೆ ನೀಡಬೇಕು. ಇದಕ್ಕೆ ಮತದಾರರ ಜವಾಬ್ದಾರಿ ಹೆಚ್ಚಿದೆ. ಮತದಾರರು ಅತ್ಯಂತ ಎಚ್ಚರದಿಂದ ತಮ್ಮ ಪ್ರತಿನಿಧಿಗಳನ್ನು ಆರಿಸಬೇಕು. ಇಂದು ಹಣ ಬಲದಿಂದ ಗೆದ್ದು ಬೀಗುತ್ತಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ. ಸರ್ವಾಧಿಕಾರಿ ಧೋರಣೆ, ಹಣಬಲ ಇದೆಲ್ಲದರ ಬದಲಾವಣೆ ಜನರಿಂದ ಮಾತ್ರ ಸಾಧ್ಯ" ಎಂದರು.
"ಇಂದಿನ ರಾಜಕಾರಣಿಗಳಿಗೆ ಯಾವುದೇ ಸಿದ್ದಾಂತಗಳಿಲ್ಲ, ಅವರಿಗೆ ಅಧಿಕಾರವೇ ಮುಖ್ಯ. ಬಟ್ಟೆ ಬದಲಿಸಿದಂತೆ ಪಕ್ಷ ಬದಲಾವಣೆ ಮಾಡುತ್ತಾರೆ. ಸದ್ಯ ಲೋಕಸಭೆ ಚುನಾವಣೆ ಎದುರಾಗಿದೆ. ನಮ್ಮ ನಡುವೆ ಒಳ್ಳೆಯ ಕೆಲಸ ಮಾಡುವರನ್ನು ಆಯ್ಕೆ ಮಾಡಬೇಕು. ಜನರು ವಿವೇಚನೆಯಿಂದ ಈ ಕಾರ್ಯವನ್ನು ಮಾಡಬೇಕು. ಸರಿಯಾದವರನ್ನು ಗೆಲ್ಲಿಸಿದರೆ ನಾವು ಮತ್ತು ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇಲ್ಲವಾದರೇ ನಾವು ಸೋಲುತ್ತೇವೆ" ಎಂದು ತಿಳಿದರು.
ದೇಶದಲ್ಲಿ ಉತ್ತಮ ಆಡಳಿತಕ್ಕಾಗಿ ನಿರಂತರ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಮಾತನಾಡುವವರನ್ನು, ಪ್ರಶ್ನಿಸುವವರನ್ನು ಹಿಂದೂ ದೇಶದ ವಿರೋಧಿಗಳು, ದೇಶದ್ರೋಹಿಗಳು ಎಂದು ಪಟ್ಟಿ ಕಟ್ಟಲಾಗುತ್ತದೆ. ಇಂದಿಗೂ ಎಂಎಲ್‍ಎಗಳನ್ನು ಕೋಟ್ಯಂತರ ರೂ. ಹಣ ನೀಡಿ ಕೊಂಡುಕೊಳ್ಳುವ ರೆಸಾರ್ಟ್ ರಾಜಕೀಯ ಜೀವಂತವಾಗಿದೆ. ಇದರ ಅರ್ಥ ಭ್ರಷ್ಟಾಚಾರ ಹಿಂದಿಗಿಂತಲೂ ಇಂದು ಮಿತಿಮೀರಿ ಬೆಳೆದಿದೆ ಎಂಬುದಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದಲ್ಲಿ ಕೆಲಸ ಮಾಡಬೇಕಿದ್ದ ಮಾಧ್ಯಮಗಳು ತಮ್ಮತನವನ್ನು ಮರೆತು ಆಳುವವರಿಗೆ ಮಾರಾಟವಾಗಿವೆ. ಮಾಧ್ಯಮಗಳನ್ನು ಅಧಿಕಾರಸ್ಥರು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಇಂದಿರಾಗಾಂಧಿ ಅವರ ಕಾಲದಲ್ಲಿ ಘೋಷಿತ ಸರ್ವಾಧಿಕಾರಿ ಧೋರಣೆ ಇತ್ತು, ಇಂದು ಅಘೋಷಿತ ಸರ್ವಾಧಿಕಾರಿ ಧೋರಣೆ ಹೇರಲಾಗುತ್ತಿದೆ ಎಂದು ನುಡಿದರು.
ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಬದಲಾಗುವ ನಂಬಿಕೆ ಇದೆ. 400 ಸೀಟುಗಳನ್ನು ಗೆದ್ದು ಬಹುಮತ ಗಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟು ಬಹುಮತ ಗಳಿಸುವ ಸಾಧ್ಯತೆ ಇಲ್ಲ. ಬಹುಮತವನ್ನು ಜನರು ನೀಡಬೇಕೇ ಹೊರತು ಅವರು ಹೇಳಿಕೊಳ್ಳುವುದಲ್ಲ. ಅವರ ಮಾತಿನಲ್ಲಿ ಅಹಂಕಾರ ಕಾಣಿಸುತ್ತಿದೆ. ಇಂದಲ್ಲ ನಾಳೆ ಸರ್ವಾಧಿಕಾರಿ ಧೋರಣೆಯನ್ನು ಜನರು ಬದಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಚುನಾವಣಾ ಬಾಂಡ್‍ಗಳ ಬಗ್ಗೆ ಪಾರದರ್ಶಕವಾಗಿ ಸತ್ಯವನ್ನು ಜನರ ಮುಂದಿಡಬೇಕು
ಎಲ್ಲಾ ಪಕ್ಷಗಳು ಚುನಾವಣಾ ಬಾಂಡ್ ಹೊಂದಿರುವುದು ಸುಪ್ರೀಂಕೋರ್ಟ್ ಆದೇಶದಿಂದ ಬಹಿರಂಗವಾಗಿದೆ. ಆಡಳಿತ ಪಕ್ಷದವರ ಷೇರು ಹೆಚ್ಚಾಗಿರುವುದು ಬಯಲಾಗಿದೆ. ಆಡಳಿತ ನಡೆಸುವವರು ಚುನಾವಣಾ ಬಾಂಡ್‍ಗಳ ಬಗ್ಗೆ ಪಾರದರ್ಶಕವಾಗಿ ಸತ್ಯವನ್ನು ಜನರ ಮುಂದಿಡಬೇಕು ಎಂದು ಹೇಳಿದರು.
ಆಡಳಿತ ಪಕ್ಷದೊಂದಿಗೆ ನೇರ ಸಂಬಂಧ ಇಟ್ಟುಕೊಂಡಿರುವ ಕೆಲವು ಕಂಪೆನಿಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‍ಗಳು ಇರುವುದು ಬಹಿರಂಗವಾಗಿದೆ. ಆ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಯುತ್ತಿಲ್ಲ. ದೊಡ್ಡ ಪ್ರಮಾಣದ ಚುನಾವಣಾ ಬಾಂಡ್‍ಗಳನ್ನು ಹೊಂದಿರುವ ಆಡಳಿತ ಪಕ್ಷ ಅದೇ ಬಂಡವಾಳದಿಂದ ಸಣ್ಣ ಸಣ್ಣ ರಾಜಕೀಯ ಪಕ್ಷಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಿದೆ. ಶಾಸಕರುಗಳನ್ನು ಖರೀದಿಸುತ್ತಿದೆ. ಬೇರೆ ಪಕ್ಷದಲ್ಲಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿದ್ದವರು ಆಡಳಿತ ಪಕ್ಷಕ್ಕೆ ಸೇರಿದ ಕ್ಷಣ ಕ್ಲೀನ್‍ಚಿಟ್ ನೀಡಲಾಗುತ್ತಿದೆ. ಇದಕ್ಕೆಲ್ಲ ಮಹಾಪ್ರಭುಗಳು ಉತ್ತರ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.
ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ ಉಪಸ್ಥಿತರಿದ್ದರು.