ಚಿಕ್ಕಮಗಳೂರು | 1.22 ಕೋಟಿ ಮೌಲ್ಯದ ಅಡಿಕೆ ಕಳ್ಳತನಕ್ಕೆ ಯತ್ನ; 6 ಮಂದಿ ಆರೋಪಿಗಳ ಬಂಧನ
ಚಿಕ್ಕಮಗಳೂರು : 350 ಚೀಲ ಅಡಿಕೆ ಮೂಟೆಗಳನ್ನು ಗುಜರಾತ್‍ಗೆ ಲಾರಿಯಲ್ಲಿ ಕೊಂಡೊಯ್ಯದೇ ಅಡಿಕೆ ಮಾಲಕನನ್ನು ವಂಚಿಸಿ ಬೇರೆಡೆ ಮಾರಾಟ ಮಾಡಲು ಮುಂದಾಗಿದ್ದ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1 ಕೋಟಿ 22 ಲಕ್ಷ 85,500 ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಜಿ ರೋಡ್‍ವೇಸ್‍ನ ಮಾಲಕ ದುಲಾರಾಮ್ ಅವರ ಮೂಲಕ ಬೀರೂರಿನ ದೇವಗಿರಿ ಟ್ರೇಡರ್ಸ್ ಮಾಲಕರು 70 ಕೆ.ಜಿ. ತೂಕದ 350 ಅಡಿಕೆ ಮೂಟೆಗಳನ್ನು ಗುಜರಾತ್ ರಾಜ್ಯದ ವಲ್ಸಾದ್ ರವಾನಿಸಿದ್ದರು.. ಆದರೆ ಲಾರಿ ಚಾಲಕ ಮುಹಮ್ಮದ್ ಸುಬಾನ್ ಹಾಗೂ ಲಾರಿ ಕಂಡಕ್ಟರ್ ಮುಹಮ್ಮದ್ ಫಯಾಝ್ ಎಂಬವರು ಅಡಿಕೆ ಮೂಟೆಗಳನ್ನು ಗುಜರಾತ್‍ಗೆ ಕೊಂಡೊಯ್ಯದೇ ಬೇರೆಡೆ ಮಾರಾಟ ಮಾಡಲು ಮುಂದಾಗಿದ್ದರು. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಅಡಿಕೆ ಮಾಲಕರು ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ತನಿಖೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ತಿರುಪಾಳ್ಯದ ಸ್ಕೋಡೋ 2 ಅಪಾರ್ಟ್‍ಮೆಂಟ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಬೆಟ್ಟಮಕ್ಕಿ ಗ್ರಾಮದ ಚಾಲಕ ಹಮ್ಮಿ ಅಮೀರ್ ಅಹ್ಮದ್, ಶಿವಮೊಗ್ಗ ನಗರದ ಟಿಪ್ಪುನಗರದ ಲಾರಿ ಚಾಲಕ ಮುಹಮ್ಮದ್ ಗೌಸ್ ಖಾನ್, ಶಿವಮೊಗ್ಗ ನಗರ ಹಳೇ ತೀರ್ಥಹಳ್ಳಿ ರಸ್ತೆ ನಿವಾಸಿ ಮುಹಮ್ಮದ್ ಸುಭಾನ್, ಶಿವಮೊಗ್ಗದ ಮುಹಮ್ಮದ್ ಫಯಾಝ್, ಕಡೂರು ತಾಲೂಕಿನ ದಾಸಯ್ಯನಗುತ್ತಿ ಮುಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ.
ಗುಜರಾತ್ ರಾಜ್ಯದ ವಲ್ಸಾದ್ ಎಂಬಲ್ಲಿಗೆ 350 ಮೂಟೆ ಅಡಿಕೆ ಚೀಲವನ್ನು ತಲುಪಿಸಬೇಕಿದ್ದ ಆಡಿಕೆ ಮೂಟೆಗಳನ್ನು ಆರೋಪಿಗಳು ಹೊಳಲ್ಕೆರೆ ತಾಲೂಕು ಹೊಸಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಅವರ ಕೋಳಿ ಫಾರಂ ಬಳಿ ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಬಚ್ಚಿಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಬಂಧಿತ ಆರೋಪಿತರು ಬೀರೂರು ಪೊಲೀಸ್ ಠಾಣಾ ವ್ಯಾಪ್ತಿ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ವಿಶೇಷ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.