ದೇಶದ ಜನರನ್ನು ನಂಬಿಸಿ ಮೋಸ ಮಾಡುವುದು ಪ್ರಧಾನಿ ಮೋದಿಯವರಿಗೆ ರೂಢಿಯಾಗಿದೆ : ಸಿಎಂ ಸಿದ್ದರಾಮಯ್ಯ

Update: 2024-04-23 13:26 GMT

Photo : x/@siddaramaiah

ಚಿತ್ರದುರ್ಗ: ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನಸಮಾವೇಶವನ್ನು ಉದ್ಘಾಟಿಸಿ, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ದೇಶದ ರೈತರ 76,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ನರೇಂದ್ರ  ಮೋದಿ ಅವರು ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಈಗ ಹೇಳಿ ಮೋದಿ ಯಾರ ಪರ? ಎಂದು ಜನರನ್ನು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಎಂದರು. ನನ್ನ ಕೈಗೆ ಅಧಿಕಾರ ಕೊಡಿ 6 ತಿಂಗಳಲ್ಲಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿ ಹತ್ತು ವರ್ಷ ಆಯಿತು. ಹದಿನೈದು ಪೈಸೆಯನ್ನೂ ಹಾಕಲಿಲ್ಲ ಎಂದು ಟೀಕಿಸಿದರು.

ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ಹೌದಾ? ಅಲ್ಲವೇ? ಎಂದು ನೀವೇ ತೀರ್ಮಾನ ಮಾಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News