ಜನ ಮೆಚ್ಚಿದ ʼಕಲ್ಕಿ 2898 AD ʼ | ಬಾಕ್ಸ್ ಆಫೀಸ್ ಬಾಚುತ್ತಿರುವ ದುಬಾರಿ ಬಜೆಟ್ ಚಿತ್ರ

Update: 2024-07-01 16:07 GMT

ಕಲ್ಕಿ 2898 AD |  PC : X 

ವಿಶ್ವದಾದ್ಯಂತ ಸಿನೆಮಾ ಪ್ರಿಯರು ಪ್ರಭಾಸ್ ಮುಖ್ಯ ಪಾತ್ರದ ಕಲ್ಕಿ 2898 AD ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 4 ನೇ ದಿನಕ್ಕೆ ಕಾಲಿಟ್ಟಿರುವ 'ಕಲ್ಕಿ 2898 AD' ಚಿತ್ರದ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ದಾಟಿದೆ.

ಭಾರತದಲ್ಲಿ ಆರಂಭಿಕ ಅಂದಾಜಿನ ಪ್ರಕಾರ 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಬಿಡುಗಡೆಯಾದ 4 ದಿನಗಳಲ್ಲೇ 300 ಕೋಟಿ ರೂ. ಗಳಿಕೆಯ ಗಡಿ ದಾಟಿದೆ.

ಚಿತ್ರ ತನ್ನ ಮೊದಲ ದಿನ 95.3 ಕೋಟಿ ರೂ, 2ನೇ ದಿನ 57.6 ಕೋಟಿ ರೂ , 3ನೇ ದಿನ 64.5 ಕೋಟಿ ರೂ ಮತ್ತು ಅದರ 4ನೇ ದಿನ ಸುಮಾರು 85 ಕೋಟಿ ರೂ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ಟಿ 20 ವಿಶ್ವಕಪ್‌ ಫೈನಲ್‌ ಪಂದ್ಯ ಚಿತ್ರದ ಶನಿವಾರದ ಸಂಗ್ರಹದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿತ್ತು. ಆದರೆ ರವಿವಾರದ ಕಲೆಕ್ಷನ್ ಶನಿವಾರದ ನಷ್ಟವನ್ನು ಭರಿಸಿದೆ. ಉತ್ತರ ಅಮೆರಿಕಾದಲ್ಲಿ ಕಲ್ಕಿ ತನ್ನ ಮೊದಲ ವೀಕೆಂಡ್ ನಲ್ಲಿ 10 ಮಿಲಿಯನ್ ಡಾಲರ್ ಮೈಲಿಗಲ್ಲನ್ನು ದಾಟಿದೆ.

ಭಾನುವಾರ, ಕಲ್ಕಿ 2898 ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 10.85 ಮಿಲಿಯನ್ ಡಾಲರ್ ಗಳಿಸಿತು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ಹೆಸರೇ ಸೂಚಿಸುವಂತೆ ಚಿತ್ರವು ಹಿಂದೂ ಪುರಾಣವನ್ನು ಭವಿಷ್ಯದೊಂದಿಗೆ ಕನೆಕ್ಟ್ ಮಾಡುತ್ತದೆ.

ಮಹಾಭಾರತದ ಪ್ರಕಾರ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿರುವ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಈ ಕುಕೃತ್ಯಕ್ಕಾಗಿ ಕೃಷ್ಣ ಅವನಿಗೆ ಅಮರನಾಗಿ ಕಾಡಿನಲ್ಲಿ ಸುತ್ತುವ ಶಾಪ ನೀಡುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿದ್ದ ದೈವಿಕ ರತ್ನವನ್ನೂ ತೆಗೆದುಕೊಳ್ಳಲಾಗುತ್ತೆ. ಕಲಿಯುಗದಲ್ಲಿ ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿಯನ್ನು ರಕ್ಷಿಸುವ ಮೂಲಕ ಅವನ ವಿಮೋಚನೆ ಆಗಲಿದೆ. ಕಲ್ಕಿ ಸಿನೆಮಾದ ಕಥೆ ಅಶ್ವತ್ಥಾಮನ ಈ ಪ್ರಯತ್ನದ ಸುತ್ತ ತಿರುಗುತ್ತೆ.

ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 81 ವರ್ಷದ ಅಮಿತಾಬ್ ಬಚ್ಚನ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನಟನೆ ಅನೇಕ ಕಿರಿಯ ಸಹನಟರಿಗಿಂತ ಹೆಚ್ಚು ಪ್ರಭಾವಿಯಾಗಿದೆ ಎಂಬ ವಿಮರ್ಶೆಗಳಿವೆ. ಚಿತ್ರದಲ್ಲಿ ಅವರ ಸಂಭಾಷಣೆ ಎಲ್ಲರಿಂದ ಪ್ರಶಂಸೆ ಪಡೆದಿದೆ.

ಸಂತೋಷ್ ನಾರಾಯಣನ್ ಚಿತ್ರದ ಸಂಗೀತ ನಿರ್ದೇಶನಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಸರ್ಬಿಯಾದ ಜೊರ್ಜೆ ಸ್ಟೋಯಿಕೋವಿಕ್ ಅವರ ಸಿನಿಮಾಟೋಗ್ರಫಿ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಮಾಡಿದ್ದಾರೆ.

600 ಕೋಟಿ ರೂ (75 ಮಿಲಿಯನ್ ಅಮೆರಿಕ ಡಾಲರ್) ನಿರ್ಮಾಣದ ಬಜೆಟ್‌ನಲ್ಲಿ ನಿರ್ಮಿಸಲಾದ ಇದು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರವಾಗಿದೆ.

ಚಿತ್ರವು ಜೂನ್ 27 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರ ನಿರ್ಮಾಪಕ ಅಶ್ವಿನಿ ದತ್ ಚಿತ್ರದ ಎರಡನೇ ಭಾಗ ಬರಲಿರುವ ಬಗ್ಗೆ ಈಗಾಗಲೇ ಘೋಷಿದ್ದಾರೆ. ಎರಡನೇ ಭಾಗ ಕಮಲ್ ಹಸನ್ ಅವರು ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದನ್ನು ಕೇಂದ್ರೀಕರಿಸಿರಲಿದೆ ಎಂದು ಹೇಳಿದ್ದಾರೆ.

ಚಿತ್ರದ ಎರಡನೇ ಭಾಗದ ಚಿತ್ರೀಕರಣ 60% ರಷ್ಟು ಮುಗಿದಿದೆ ಮತ್ತು ಕೆಲವು ನಿರ್ಣಾಯಕ ಮತ್ತು ಪ್ರಮುಖ ಭಾಗದ ಚಿತ್ರೀಕರಣ ಮಾತ್ರ ಉಳಿದಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News