ಲೈಂಗಿಕ ದೌರ್ಜನ್ಯ ತಡೆಗೆ ‘ಕೇರಳ ಮಾದರಿ ಸಮಿತಿ ರಚನೆ’ ಕುರಿತು ಸೆ.16ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ

Update: 2024-09-06 15:02 GMT

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಸಂಬಂಧ ಕೇರಳ ಮಾದರಿಯಲ್ಲೇ ಸಮಿತಿ ರಚನೆಗೆ ಆಗ್ರಹಿಸಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಸಿಎಂಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಕುರಿತು ಚರ್ಚಿಸಲು ಸೆ.16ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದೆಯರು ಹಾಗೂ ಚಿತ್ರರಂಗದ ಪ್ರಮುಖರ ಸಭೆ ಕರೆಯಲಾಗಿದೆ.

ಕೂಡಲೇ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ವಾಣಿಜ್ಯ ಮಂಡಳಿಗೆ ಶುಕ್ರವಾರ ಸೂಚನೆ ನೀಡಿತ್ತು. ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸೆ.13ರೊಳಗೆ ಸಭೆ ನಡೆಸಿ ಚರ್ಚಿಸಬೇಕು. ನಟಿಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಚಿತ್ರರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸುವಂತೆ ತೀರ್ಮಾನ ತೆಗೆದುಕೊಳ್ಳಿ ಎಂದು ಮಹಿಳಾ ಆಯೋಗ, ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ.

ಆ ಹಿನ್ನೆಲೆಯಲ್ಲಿ ಸೆ.16ಕ್ಕೆ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಯಲಿದೆ' ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮಾ.ಗಿರೀಶ್ ಮಾಹಿತಿ ನೀಡಿದ್ದು, ‘ನಗರದ ಪ್ರಮುಖ ಪಬ್‍ಗಳಲ್ಲಿ ನಟ-ನಟಿಯರು ಭಾಗಿಯಾಗಿ ಪಾರ್ಟಿ ನಡೆಸುವುದು ವಾಡಿಕೆ. ಸರಕಾರ ಇಂತಹ ಪಾರ್ಟಿಗಳಿಗೆ ಮೊದಲು ಕಡಿವಾಣ ಹಾಕಬೇಕು. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸುತ್ತೇವೆ. ಕಲಾವಿದೆಯರ ಹಿತಕಾಪಾಡಲು ವಾಣಿಜ್ಯ ಮಂಡಳಿ ಸದಾ ಬದ್ಧವಾಗಿದೆ' ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News