3 ಸೆಕೆಂಡ್‌ ವಿಡಿಯೋ ಬಳಸಿದ್ದಕ್ಕೆ ನೋಟಿಸ್;‌ ಬಹಿರಂಗ ಪತ್ರ ಬರೆದು ನಟ ಧನುಷ್ ವಿರುದ್ಧ ವಾಗ್ದಾಳಿ ನಡೆಸಿದ ನಟಿ ನಯನತಾರಾ

Update: 2024-11-16 12:35 GMT

ಧನುಷ್  , ನಯನತಾರಾ | PC : PTI


ಬೆಂಗಳೂರು: ಅನುಮತಿಯಿಲ್ಲದೆ ಚಿತ್ರದ ಮೂರು ಸೆಕೆಂಡ್ ತುಣುಕನ್ನು ಪ್ರದರ್ಶಿಸಿದಕ್ಕೆ ನಯನತಾರ ಮತ್ತು ನೆಟ್ ಫ್ಲಿಕ್ಸ್ ವಿರುದ್ಧ ₹10 ಕೋಟಿ ಬೇಡಿಕೆ ಇಟ್ಟು ಕಾನೂನು ನೋಟಿಸ್ ಕಳುಹಿಸಿದ ನಟ ಧನುಷ್ ವಿರುದ್ಧ ನಟಿ ನಯನತಾರಾ ಬಹಿರಂಗ ಪತ್ರ ಬರೆದು ವಾಗ್ದಾಳಿ ನಡೆಸಿದ್ದಾರೆ.

ನಯನತಾರಾ ಕುರಿತ ಸಾಕ್ಷ್ಯ ಚಿತ್ರ ‘ನಯನತಾರಾ: ಬಿಯಾಂಡ್​ ದಿ ಫೇರ್ ಟೇಲ್’ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲು ಸಜ್ಜಾಗಿದ್ದು, ಇತ್ತೀಚೆಗಷ್ಟೆ ಡಾಕ್ಯುಮೆಂಟರಿಯ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ನಯನತಾರಾ ಬಗ್ಗೆ ಅವರ ಆತ್ಮೀಯರು ಮಾತನಾಡಿದ್ದು, ಕೆಲವು ಸಿನಿಮಾಗಳ ದೃಶ್ಯಗಳು, ಚಿತ್ರೀಕರಣದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ಮೂರು ಸೆಕೆಂಡ್​ನ ಶೂಟಿಂಗ್​ನ ವಿಡಿಯೋ ಒಂದನ್ನು ಬಳಸಲಾಗಿದ್ದು, ಆ ವಿಡಿಯೋ ಧನುಶ್ ನಿರ್ಮಾಣದ ‘ನಾನುಮ್ ರೌಡಿ ದಾ’ ಸಿನಿಮಾದ ದೃಶ್ಯವಾಗಿದೆ. ಆ ಸಿನಿಮಾದ ನಿರ್ಮಾಪಕ ಕೂಡಾ ಧನುಶ್ ಅವರೇ ಆಗಿದ್ದಾರೆ.

ತಾನು ನಿರ್ಮಾಣ ಮಾಡಿದ ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿದ್ದಕ್ಕಾಗಿ ನಯನತಾರಾಗೆ ಮತ್ತು ನೆಟ್​ಫ್ಲಿಕ್ಸ್​ಗೆ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟು ಧನುಶ್ ನೊಟೀಸ್ ಕಳುಹಿಸಿದ್ದಾರೆ. ಧನುಶ್ ಕಳಿಸಿರುವ ನೊಟೀಸ್​ಗೆ ಅತ್ಯಂತ ತೀಕ್ಷ್ಣವಾಗಿ ಉತ್ತರಿಸಿರುವ ನಯನತಾರಾ, ಧನುಶ್​ ಅನ್ನು ನೀಚ ವ್ಯಕ್ತಿಯೆಂದು, ಕೃತಜ್ಞತೆ ಇಲ್ಲದವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನೂಮ್ ರೌಡಿ ದಾ’ ಸಿನಿಮಾದ ಹಾಡು, ವಿಡಿಯೋ ತುಣುಕು ಬಳಸಿಕೊಳ್ಳಲು ಕಳೆದ ಎರಡು ವರ್ಷದಿಂದಲೂ ಅನುಮತಿ ಕೇಳಿ ಕೊನೆಗೆ ನಿಮ್ಮಿಂದ ಪ್ರತಿಕ್ರಿಯೆ ಬರದೇ ಇದ್ದಾಗ ಅದನ್ನು ಕೈಬಿಟ್ಟು, ಅದೇ ಸಿನಿಮಾದ ಶೂಟಿಂಗ್ ದೃಶ್ಯವನ್ನು ಮರು ಚಿತ್ರೀಕರಿಸಿರುವುದಾಗಿ ನಯನತಾರಾ ತಿಳಿಸಿದ್ದಾರೆ.

‘ನಾನುಮ್ ರೌಡಿ ದಾ’ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿವೆ. ಸಿನಿಮಾ ನಿರ್ಮಾಪಕನಾಗಿ ನಿಮಗೆ ಅದು ಬಹಳ ದೊಡ್ಡ ಗೆಲುವಾಗಿದ್ದರೂ ಸಹ ಆ ಸಿನಿಮಾ ಮೇಲೆ, ಸಿನಿಮಾ ತಂಡದ ಮೇಲೆ ನೀವು ಆಡಬಾರದ ಮಾತುಗಳನ್ನು ಆಡಿದ್ದೀರಿ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಸಹ ನೀವು ಆಡಿದ ಮಾತುಗಳು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದ್ದು ಅದು ಇನ್ನೂ ಆರಿಲ್ಲ’, ಅಭಿಮಾನಿಗಳು ನೋಡಿದ ಧನುಷ್ ಬೇರೆ ಅಸಲಿ ಧನುಷ್ ಬೇರೆಯೇ, ಅವರು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿರುವುದಾಗಿ ನಯನತಾರಾ ಪತ್ರದಲ್ಲಿ ಹೇಳಿದ್ದಾರೆ

ಈ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ನಯನತಾರಾ ಸ್ಪಷ್ಟಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News