ಪುಷ್ಪ-2 ಚಿತ್ರ ಪ್ರೇರಣೆ: ಚಿತ್ರದ ಪ್ರದರ್ಶನದ ವೇಳೆ ವ್ಯಕ್ತಿಯೊಬ್ಬನ ಕಿವಿ ಕಚ್ಚಿದ ಚಿತ್ರಮಂದಿರ ಸಿಬ್ಬಂದಿ!

Update: 2024-12-12 13:16 GMT

ಪುಷ್ಪ-2 | PC : freepressjournal.in

ಗ್ವಾಲಿಯರ್: ತೆಲುಗು ನಟ ಅಲ್ಲು ಅರ್ಜುನ್‌ರ ಬ್ಲಾಕ್ ಬಸ್ಟರ್ ಚಿತ್ರ 'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಚಿತ್ರಮಂದಿರ ಸಿಬ್ಬಂದಿಗಳ ನಡುವೆ ನಡೆದ ದೈಹಿಕ ಘರ್ಷಣೆಯ ಸಂದರ್ಭದಲ್ಲಿ ಓರ್ವ ಸಿಬ್ಬಂದಿ ತನ್ನ ಸಹ ಸಿಬ್ಬಂದಿಯ ಕಿವಿ ಕಚ್ಚಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ ಎಂದು Free Press Journal ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆ ಮಂಗಳವಾರ ರಾತ್ರಿ ಗ್ವಾಲಿಯರ್‌ನ ಫಲ್ಕ ಬಝಾರ್‌ನಲ್ಲಿರುವ ಕಾಜಲ್ ಚಿತ್ರಮಂದಿರದಲ್ಲಿ ನಡೆದಿದೆ. ಪುಷ್ಪ-2 ಚಲನಚಿತ್ರದ ಮಧ್ಯಂತರದ ವೇಳೆ ಘಟನೆಯ ಸಂತ್ರಸ್ತ ಹಾಗೂ ಗುಡಾಗುಡಿ ನಾಕ ನಿವಾಸಿ ಶಬ್ಬೀರ್ ಖಾನ್ ಹಾಗೂ ಕ್ಯಾಂಟೀನ್ ಸಿಬ್ಬಂದಿಗಳಾದ ರಾಜು, ಚಂದನ್ ಹಾಗೂ ಎಂ.ಎ.ಖಾನ್ ನಡುವೆ ಖಾದ್ಯ ತಿಂಡಿಗಳಿಗೆ ಪಾವತಿ ಮಾಡಬೇಕಾದ ವಿಚಾರದಲ್ಲಿ ವಾಗ್ವಾದವೇರ್ಪಟ್ಟಿದೆ.

ಈ ವಾಗ್ವಾದವು ಜಗಳಕ್ಕೆ ತಿರುಗಿದ್ದು, ಕ್ಯಾಂಟೀನ್ ಸಿಬ್ಬಂದಿಯೊಬ್ಬರು ಖಾನ್‌ರ ಕಿವಿ ಕಚ್ಚಿದ್ದಾರೆ ಎಂದು ವರದಿಯಾಗಿದೆ. ಇದರಿಂದ ತೀವ್ರ ರಕ್ತಸ್ರಾವಕ್ಕೀಡಾಗಿರುವ ಖಾನ್‌ರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಖಾನ್‌ಗೆ ಕಿರು ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಗಿದ್ದು, ಎಂಟು ಹೊಲಿಗೆಗಳನ್ನು ಹಾಕಲಾಗಿದೆ ಎಂದು ಹೇಳಲಾಗಿದೆ.

ನಂತರ, ಘಟನೆಯ ಸಂಬಂಧ ಖಾನ್ ಪೊಲೀಸರಿಗೆ ದೂರು ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News