ಮೂವರು ಮಹಿಳೆಯರ ಬದುಕಿನ ಕಾವಾತ್ಮಕ ಚಿತ್ರ All we Imagine is Light

Update: 2024-12-11 05:57 GMT

ದೇಶದ ಅಸಂಖ್ಯಾತ ಸಾಮಾನ್ಯ ದುಡಿಯುವ ಜನರಿಗೆ ಕನಸಿನ ನಗರಿಯಾದ ಮುಂಬೈ ಶಹರದ ದಿನನಿತ್ಯದ ಜಂಜಡಗಳ ನಡುವೆ ಕಳೆದುಹೋಗುವ ಈ ಸಾಮಾನ್ಯ ಜನ ತಮ್ಮ ಅಭದ್ರತೆಯ, ಅನಿಶ್ಚಿತತೆಯ ಬದುಕಿನ ಜೊತೆಯಲ್ಲೇ ಯಾವುದಾದರೊಂದು ದಿನ ತಮ್ಮ ಕನಸುಗಳು ಸಾಕಾರಗೊಳ್ಳುವವು ಎಂಬ ನಿರೀಕ್ಷೆಯಲ್ಲಿ ತಮಗೆದುರಾಗುವ ಎಲ್ಲಾ ರೀತಿಯ ಕಷ್ಟಗಳಿಗೆ ಸವಾಲೊಡ್ಡಿ ಬದುಕುವ ಛಲವನ್ನೇ ಪಾಯಲ್ ಕಪಾಡಿಯಾ ತಮ್ಮ ‘All we Imagine is Light’ ಚಿತ್ರದಲ್ಲಿ ಕಾವ್ಯಾತ್ಮಕವಾಗಿ ಚಿತ್ರಿಸಿದ್ದಾರೆ.

ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮೂರು ಮಂದಿ ವಿಭಿನ್ನ ನೆಲೆಯ, ವಿಭಿನ್ನ ವಯಸ್ಸಿನ ಮಹಿಳೆಯರಿದ್ದಾರೆ. 20ರ ಹರೆಯದ ಕನಸುಕಂಗಳ ಬಾಲೆ ಅನು(ದಿವ್ಯ ಪ್ರಭಾ), 30ರ ನಡುಪ್ರಾಯದ ಪ್ರಭಾ (ಕಣಿ ಕುಸ್ರೊಟಿ) ಇಬ್ಬರೂ ಮುಂಬೈನ ಒಂದು ಸಾಧಾರಣ ಖಾಸಗಿ ಆಸ್ಪತ್ರೆಯಲ್ಲಿ ದುಡಿಯುವ ಮಲಯಾಳಿ ನರ್ಸ್ ಗಳು, 50ರ ಪಾರ್ವತಿ (ಛಾಯಾ ಕದಮ್) ಅದೇ ಆಸ್ಪತ್ರೆಯಲ್ಲಿ ಅಡಿಗೆಯವಳಾಗಿ ಕೆಲಸ ಮಾಡುವಾಕೆ.

ಮಧ್ಯವಯಸ್ಸಿನ ಪ್ರಭಾ ಸೀನಿಯರ್ ನರ್ಸ್, ಅನು ಅದೇ ಆಸ್ಪತ್ರೆಯಲ್ಲಿ ಜ್ಯೂನಿಯರ್ ನರ್ಸ್ ಆಗಿ ಕೆಲಸ ಮಾಡುತ್ತಾ ಪ್ರಭಾಳ ಸಾಧಾರಣ ಕೋಣೆಯಲ್ಲಿಯೇ ವಾಸಿಸುತ್ತಾಳೆ. ಪ್ರಭಾಳ ಗಂಡ ಮದುವೆಯಾದ ತಕ್ಷಣ ಜರ್ಮನಿಗೆ ಹೋದವನು ತಿರುಗಿ ಬಂದಿಲ್ಲ, ಆತನ ಪತ್ತೆಯೂ ಇಲ್ಲ, ಒಂದು ವರ್ಷದ ಹಿಂದೆ ಪೋನ್ ಮಾಡಿದ್ದ ಮಸುಕು ನೆನಪಲ್ಲೇ ಕಾಲಕಳೆಯುತ್ತಿದ್ದಾಳೆ. ಕೆಲಸದಲ್ಲಿ ಬಹಳ ಚುರುಕು ಮತ್ತು ಬುದ್ಧಿವಂತೆಯಾದ ಪ್ರಭಾ ಒಂಟಿ ಜೀವನದಲ್ಲೇ ಸಂತೃಪ್ತಿಯಿಂದ ಇದ್ದಾಳೆ. ತನ್ನ ಏಕತಾನತೆಯ ಕೆಲಸ ಮತ್ತು ಬದುಕಿನಲ್ಲಿ ಅದೆಷ್ಟು ಮಗ್ನಳಾಗಿದ್ದಾಳೆ ಅಂದರೆ ತನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಮಲಯಾಳಿ ಜ್ಯೂನಿಯರ್ ಡಾಕ್ಟ್ರು ಪ್ರೇಮ ನಿವೇದನೆ ಮಾಡಿ ಕವಿತೆ ಬರೆದು ಕೊಟ್ಟರೂ ಅದನ್ನು ಓದಿ ಪ್ರತಿಕ್ರಿಯಿಸಲಾರದಷ್ಟು.

ಆದರೆ ಹದಿಹರೆಯದ ಚಿಗರೆಕಂಗಳ ಚೆಲುವೆ ಅನು ಹಾಗಲ್ಲ, ಜೀವಂತ ಕನಸುಗಾರ್ತಿ. ಬದುಕನ್ನು ಸಂಪೂರ್ಣ ಅನುಭವಿಸುವ ಆಸೆಯುಳ್ಳವಳು, ಛಲಗಾತಿ. ಅವಳಿಗೊಬ್ಬ ಮುಸಲ್ಮಾನ ಪ್ರಿಯಕರನಿದ್ದಾನೆ-ಶಿಯಾಜ್(ಹೃದು ಹರೂನ್). ಕೆಲಸ ಮುಗಿದ ಬಳಿಕ ಪ್ರಭಾಳಿಗೂ ತಿಳಿಯದಂತೆ ಶಿಯಾಜ್‌ನನ್ನು ಭೇಟಿಯಾಗುತ್ತಾ ಮನಸ್ಸಿನ, ದೇಹದ ಆಸೆಗಳನ್ನು ಪೂರೈಸಿಕೊಳ್ಳುತ್ತಿರುತ್ತಾಳೆ. ಅವಳ ಒಡನಾಟದ ಬಗ್ಗೆ ಅಸ್ಪತ್ರೆಯ ಇತರ ಸಿಬ್ಬಂದಿಗೆ ಕುತೂಹಲ ವಿಷಯ ತಿಳಿದ ಪ್ರಭಾ ಮೊದಮೊದಲು ಅದನ್ನು ನಿರ್ಲಕ್ಷ್ಯ ಮಾಡಿದರೂ ಒಮ್ಮೆ ಸಿಟ್ಟಿಗೆದ್ದು ಅನುವನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ಹೀಗೆ ಬದುಕು ಸಾಗುತ್ತಿರುವಾಗ ಅಚಾನಕ್ಕಾಗಿ ವಿದೇಶದಿಂದ ಪಾರ್ಸೆಲಿನಲ್ಲಿ ಬಂದ ರೈಸ್ ಕುಕ್ಕರ್ ಪ್ರಭಾಳ ಜೀವನದಲ್ಲಿ ಮಧುರ ತರಂಗಗಳನ್ನು ಎಬ್ಬಿಸುತ್ತದೆ. ಅದು ತನ್ನ ಗಂಡನದೇ ಇರಬಹುದೇ? ಯಾರೂ ಇಲ್ಲದಾಗ ಅದನ್ನು ತಬ್ಬಿಕೊಂಡು ಪ್ರಭಾ ಮಧುರ ಕ್ಷಣಗಳನ್ನು ಅನುಭವಿಸುತ್ತಾಳೆ.

ಮುಂಬೈನ ಜಿಟಿಜಿಟಿ ಮಳೆಗೆ ಈ ಇಬ್ಬರೂ ತೋರುವ ಪ್ರತಿಕ್ರಿಯೆಗಳಲ್ಲಿ ಇವರಿಬ್ಬರ ವ್ಯಕ್ತಿತ್ವವನ್ನು ಪಾಯಲ್ ಕಪಾಡಿಯಾ ಅನಾವರಣಗೊಳಿಸಿದ್ದಾರೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಹನಿಗಳು ಅನುವಿನ ಹೃದಯದಲ್ಲಿ ಪ್ರಣಯದ ಆಕಾಂಕ್ಷೆಗಳನ್ನು ಹುಟ್ಟುಹಾಕಿ ಶಿಯಾಜ್‌ಗೆ ಮೆಸೇಜು ಹೀಗೆ ಕಳಿಸುತ್ತಾಳೆ- ಇಂದು ಹನಿಯಾಗಿ ಬೀಳುತ್ತಿರುವ ಪ್ರತಿಯೊಂದು ಮಳೆಹನಿಯೂ ನನ್ನ ತುಟಿಯಿಂದ ನೀಡಿದ ಮುತ್ತುಗಳಾಗಿ ನಿನ್ನ ಮೈಯನ್ನು ಚುಂಬಿಸಲಿ. ಅದೇ ಮಳೆಯ ಹನಿಗಳು ಪ್ರಭಾಳಲ್ಲಿ ಹುದುಗಿರುವ ವಾಸ್ತವಿಕ, ವ್ಯಾವಹಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ ತಕ್ಷಣವೇ ಅವಳು ಒಣಗಲು ತಂತಿಯ ಮೇಲೆ ಹರಡಿದ್ದ ಆಸ್ಪತ್ರೆಯ ವಸ್ತ್ರಗಳನ್ನು ತಂದು ಒದ್ದೆಯಾಗುವುದರಿಂದ ತಪ್ಪಿಸುತ್ತಾಳೆ.

ಪಾರ್ವತಿಯ ಕತೆ ಇನ್ನೂ ದುರಂತದ್ದು, ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಗಂಡ ತೀರಿಹೋಗಿದ್ದಾನೆ. ಮಗ ಮದುವೆಯಾಗಿ ಬೇರೆಕಡೆ ವಾಸಿಸುತ್ತಿದ್ದಾನೆ. ಮಿಲ್ಲಿನ ಜಮೀನನ್ನು ಖರೀದಿಸಿರುವ ಮಾಲಕ ದೊಡ್ಡ ಮಾಲನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದಾನೆ. ಮಿಲ್ಲಿನ ವಸತಿಗೃಹದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಪಾರ್ವತಿಯ ಹಠದಿಂದ ಮಾಲ್‌ನ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. ಪ್ರಭಾಳ ಸಹಾಯದಿಂದ ಪಾರ್ವತಿ ವಕೀಲರೊಬ್ಬರನ್ನು ಭೇಟಿಯಾಗಿ ನ್ಯಾಯಾಲಯದಿಂದ ಪರಿಹಾರ ಪಡೆಯಲು ಪ್ರಯತ್ನಿಸಿದರೆ, ಬಡಪಾಯಿ ಪಾರ್ವತಿಯಲ್ಲಿ ಅವಳು ವಾಸಿಸುತ್ತಿರುವ ವಸತಿ ಗೃಹ ಅವಳ ಗಂಡನ ಹೆಸರಿನಲ್ಲಿತ್ತು ಎಂಬುದರ ಬಗ್ಗೆ ಯಾವುದೇ ಕಾಗದ ಪತ್ರವಾಗಲೀ, ದಾಖಲೆಗಳಾಗಲಿ ಇರುವುದಿಲ್ಲ.

ಅನಿವಾರ್ಯವಾಗಿ ಕನಸಿನ ನಗರಿಯನ್ನು ತೊರೆದು ತನ್ನ ಸ್ವಂತ ಊರು ಕರಾವಳಿಯ ರತ್ನಗಿರಿಗೆ ಹೊರಡುವ ಪಾರ್ವತಿಗೆ ಸಹಾಯ ಮಾಡಲು ಅನು ಮತ್ತು ಪ್ರಭಾ ಕೂಡಾ ಜೊತೆಗೆ ತೆರಳುತ್ತಾರೆ. ಗಗನಚುಂಬಿ ಕಟ್ಟಡಗಳ, ಜನನಿಬಿಡತೆಯ ಬಿಸಿಬಿಸಿ ಶಹರದಿಂದ ತಣ್ಣನೆಯ, ಪ್ರಶಾಂತವಾದ ರತ್ನಗಿರಿಗೆ ಕತೆ ಸ್ಥಳಾಂತರವಾಗುತ್ತದೆ. ಕನಸಿನ ರಾಣಿ ಅನು ತನ್ನ ಪ್ರಿಯತಮ ಶಿಯಾಜ್‌ನನ್ನು ಅಲ್ಲಿಗೆ ಕರೆಸಿದ್ದಾಳೆ, ಇಬ್ಬರೂ ಅಲ್ಲಿ ಪ್ರಶಾಂಶತೆಯ ನಡುವೆ ಉತ್ಕಟವಾಗಿ ಪ್ರೇಮಿಸುತ್ತಾರೆ. ಅಲ್ಲಿಯ ಕಡಲ ತೀರದಲ್ಲಿ ನಡೆದ ಆಕಸ್ಮಿಕ ಘಟನೆಯಿಂದ ಪ್ರಭಾಳ ಬದುಕು ಒಂದು ರೋಚಕವಾದ ತಿರುವು ಪಡೆಯುತ್ತದೆ.

ತಲ್ಲಣಗಳೇ ತುಂಬಿದ ಬದುಕಿನ ಪಯಣದಲ್ಲಿ ಮೂವರು ಮಹಿಳೆಯರು ಪ್ರತಿಕ್ರಿಯಿಸುವ ವಿಭಿನ್ನ ರೀತಿಗಳು- ಕನಸುಗಳನ್ನು ಬದುಕುವ, ಯಾವುದೇ ಅಡೆತಡೆಗಳನ್ನು ಎದುರಿಸಿ ಜೀವಿಸುವ ಸಾಹಸಿ ಹುಡುಗಿ ಅನು, ಜೀವನದ ಅನಿರೀಕ್ಷಿತ ಹೊಡೆತಗಳಿಂದ ವಿಚಲಿತಳಾದರೂ ಧೈರ್ಯಗೆಡದೆ ಮುಂದುವರಿಯುವ ಪಾರ್ವತಿ, ಮನಸ್ಸು ತುಂಬಾ ಕನಸುಗಳಿದ್ದರೂ ವಾಸ್ತವಕ್ಕೆ ಅನುಗುಣವಾಗಿ ವ್ಯಾವಹಾರಿಕವಾಗಿ ಬದುಕನ್ನು ಸಾಗಿಸುವ ಯಥಾಸ್ಥಿತಿವಾದಿ ಪ್ರಭಾ, ಈ ಮಹಿಳೆಯರ ಬದುಕಿನ ಕಾವಾತ್ಮಕ ಚಿತ್ರವೇ All we Imagine is Light.

ಮಹಿಳೆಯರ ಕುರಿತ ಚಿತ್ರದಲ್ಲಿ ಕೂಡಾ ಈಗಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನಿರುಮ್ಮಳವಾಗಿ ಬದುಕುತ್ತಿರುವ ಯುವಕನೊಬ್ಬನ ಪರಿಚಯ ಮಾಡುತ್ತಾರೆ ಪಾಯಲ್ ಕಪಾಡಿಯಾ. ರತ್ನಗಿರಿಯ ಕರಾವಳಿಯ ಬೀಚಿನಲ್ಲಿ ತನ್ನ ತಂದೆಯದ್ದೋ ಅಥವಾ ಮಾಲಕನದ್ದೋ ಆಗಿರುವ ಸಣ್ಣ ಹೋಟೆಲನ್ನು ನಡೆಸುತ್ತಿರುವ ಹತ್ತು ಹದಿನೈದು ವರುಷದ ಹುಡುಗನೊಬ್ಬ ಕಿವಿಗೆ ಇಯರ್ ಫೋನ್ ತಗಲಿಸಿಕೊಂಡು ಎಲ್ಲಾ ಜಂಜಡಗಳ ನಡುವೆ ಸಂಗೀತ ಕೇಳುತ್ತಾ, ಅನುಭವಿಸುತ್ತಾ, ನಿಶ್ಚಿಂತನಾಗಿ ಬದುಕುವ ದೃಶ್ಯವೇ ಸುಂದರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಐವನ್ ಡಿ’ಸಿಲ್ವಾ

contributor

Similar News