ʼಶಿವಾಜಿʼ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ ರಿಷಬ್‌ ಶೆಟ್ಟಿ; ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

Update: 2024-12-04 10:51 GMT

Photo:X/@shetty_rishab

ಬೆಂಗಳೂರು: ಮರಾಠ ದೊರೆ ಛತ್ರಪತಿ ಶಿವಾಜಿಯ ಜೀವನಾಧಾರಿತ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡ ನೆಲದ ಮೇಲೆ ದಾಳಿ ನಡೆಸಿ, ಸ್ಥಳೀಯರನ್ನು ಹತ್ಯೆಗೈದಿರುವ ಮರಾಠ ದೊರೆಯನ್ನು ವೈಭವೀಕರಿಸುವ ಚಿತ್ರದಲ್ಲಿ ನಟಿಸುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದ ಮಾಡಿದವರು, ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ವಿಜೃಂಭಿಸುವುದು ಸರಿಯೇ?” ಎಂದು ಕರಾವಳಿ ಮೂಲದ ಸಾಮಾಜಿಕ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಿರಣ್‌ ಕೊಡ್ಲಾಡಿ ಎಂಬವರು, “ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು, ಕುಮಟಾವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ.” ಎಂದು ಬರೆದಿದ್ದಾರೆ.

ಟಿಎಸ್‌ ಶೆಜ್‌ವಾಕರ್‌ ಅವರ ʼಶಿವಾಜಿಯ ಬಸ್ರೂರು ಮೇಲಿನ ದಾಳಿʼ (SIVAJI'S RAID ON BASRUR) ಗೃಂಥವನ್ನು ಉಲ್ಲೇಖಿಸಿ ಬರೆದಿರುವ ಕೊಡ್ಲಾಡಿ, “ಬಸ್ರೂರಿನ ಮೇಲೆ ದಾಳಿ ಮಾಡಿದ್ದು, ಲೂಟಿ ಮಾಡಲು. ಧನ, ಸಂಪತ್ತನ್ನು ತನ್ನೂರಿಗೆ ಕೊಂಡೊಯ್ಯಲು. ಪೋರ್ಚಿಗೀಸರ ಜೊತೆ ಕಾದಾಡಲು ಬಂದಿದ್ದರೆ, ಹಬ್ಬದ ದಿನ ರಾತ್ರಿದಾಳಿ ಮಾಡಿ, ಸ್ಥಳೀಯ ವ್ಯಾಪಾರಸ್ಥರನ್ನು ಕೊಳ್ಳೆ ಹೊಡೆಯುವ ಉದ್ದೇಶ ಇರುತ್ತಿರಲಿಲ್ಲ. ಪೋರ್ಚುಗೀಸರ ಬದಲು ಕೆಳದಿ ನಾಯಕರ ಹಿಡಿತದಲ್ಲಿ ಬಸ್ರೂರು ಇದ್ದಿದ್ದರೂ, ಆ ದಿನ ಶಿವಾಜಿ ಸೇನೆ ಅದನ್ನೇ ಮಾಡುತ್ತಿತ್ತು. ಬಲಿಯಾದವರು ಮಾತ್ರ ನಮ್ಮೂರಿನ ಹಿರಿಯರು. ಅದು ವಾಸ್ತವ.” ಎಂದು ಬರೆದಿದ್ದರೆ.

ಈ ಸಿನಿಮಾವನ್ನು ಕೈಬಿಡಿ ಎಂದು ಹಲವರು ರಿಷಬ್‌ ಶೆಟ್ಟಿಗೆ ಮನವಿ ಮಾಡಿದ್ದರೆ, ಕೆಲವರು ನಟನ ಪರ ನಿಂತಿದ್ದಾರೆ.

ಶಿವಾಜಿ ಚಿತ್ರವನ್ನು ಸಂದೀಪ್‌ ಸಿಂಗ್‌ ನಿರ್ದೇಶಿಸುತ್ತಿದ್ದು, ಈ ಹಿಂದೆ ಇವರು ಅಟಲ್‌, ಮೋದಿ, ಫೌಜಿ - 2, ಸಾವರ್ಕರ್‌ ಮೊದಲಾದ ಸಿನೆಮಾಗಳನ್ನು ನಿರ್ಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News