ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು
ಹೈದರಾಬಾದ್: ಪುಷ್ಪ 2 ಪ್ರದರ್ಶನದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬಂಧನವಾಗಿರುವ ನಟ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಲ್ಲು ಅರ್ಜುನ್ ಸಲ್ಲಿಸಿದ ಜಾಮೀನು ಮನವಿಯನ್ನು ಆಲಿಸಿದ ನ್ಯಾಯಾಲಯ, "ನಟ ಎಂದು ಹೇಳಿ ಅವರ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ಈ ನೆಲದ ಪ್ರಜೆಯಾಗಿ, ಅವರಿಗೂ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ, ಮೃತರ ಕುಟುಂಬದ ಬಗ್ಗೆಯೂ ತನಗೆ ಸಹಾನುಭೂತಿ ಇದೆ" ಎಂದು ಹೇಳಿದೆ.
ಡಿ. 4ರಂದು ಪುಷ್ಪಾ 2 ಬಿಡುಗಡೆಯಾಗುವ ಸಂದರ್ಭ ಸಂಧ್ಯಾ ಚಿತ್ರಮಂದಿರದಲ್ಲಿ ನೂಕುನುಗ್ಗಲು ಉಂಟಾಗಿದ್ದು ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್, ಮೃತರ ಕುಟುಂಬಕ್ಕೆ ಎಲ್ಲ ರೀತಿಯಿಂದಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ನನ್ನ ಪರವಾಗಿ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಅಲ್ಲದೆ, ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದರು.