55ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ | ಸಿನಿಮಾದ ಹೊಸ ಜಾಗತಿಕ ನಿರೂಪಣೆಗಳನ್ನು ಸಂಭ್ರಮಿಸುವ ಸಮಯ

Update: 2024-12-03 17:01 GMT

ಐ ಎಫ್ ಎಫ್ ಐ ಎಂದು ಜನಪ್ರಿಯವಾಗಿರುವ ಭಾರತದ 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 28, 2024 ರಂದು ಕೊನೆಗೊಂಡಿತು. ಈ ವರ್ಷ ಭಾರತದ ಈ ಚಲನಚಿತ್ರೋತ್ಸವವು ಪ್ರಪಂಚದಾದ್ಯಂತದ ಸಿನಿಮಾ ಪ್ರೇಮಿಗಳಿಗೆ ಅನೇಕ ಹೊಸ, ನವೀನ ವಿಷಯಗಳನ್ನು ಒದಗಿಸುವುದರೊಂದಿಗೆ ವ್ಯಾಪಕ ಮತ್ತು ಪರಿಶೋಧನಾತ್ಮಕವಾಗಿತ್ತು.

ಭಾರತದ ಹೆಸರಾಂತ ಚಲನಚಿತ್ರ ನಿರ್ದೇಶಕ ಶೇಖರ್ ಕಪೂರ್ ಅವರು ಹೊಚ್ಚ ಹೊಸ ಉತ್ಸವದ ನಿರ್ದೇಶಕರಾಗಿದ್ದರು. ಬೃಹತ್ ಸಂಚಾಲನಾ ಸಮಿತಿಯು ಉದ್ಯಮದ ಪ್ರತಿಷ್ಠಿತ ಹೆಸರುಗಳಾದ ಬಾಬಿ ಬೇಡಿ, ಖುಷ್ಬೂ ಸುಂದರ್, ಪ್ರಸೂನ್ ಜೋಶಿ ಮತ್ತು ಜೆರೋಮ್ ಪಿಲ್ಲಾರ್ಡ್ ಅವರನ್ನು ಒಳಗೊಂಡಿತ್ತು. ನಾನೂ ಸಂಚಾಲನಾ ಸಮಿತಿಯ ಸದಸ್ಯಳಾಗಿದ್ದೆ.

ಪ್ರಸ್ತುತ ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಯಾಗಿರುವ ಫಿಲ್ಮ್ ಬಜಾರ್ ನ 18ನೇ ಆವೃತ್ತಿಯು, ಈ ವರ್ಷ ಚಲನಚಿತ್ರ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ 350 ಚಲನಚಿತ್ರ ಯೋಜನೆಗಳನ್ನು ಪ್ರದರ್ಶಿಸಿತು. ಫಿಲ್ಮ್ ಬಜಾರ್ ನ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡ 'ಮಾರ್ಚೆ ಡು ಕೇನ್ಸ್'ನ ಮಾಜಿ ಮಾರುಕಟ್ಟೆ ಮುಖ್ಯಸ್ಥ ಜೆರೋಮ್ ಪೈಲಾರ್ಡ್ ಅವರ ಮಾರ್ಗದರ್ಶನದಲ್ಲಿ ಬಜಾರ್ ತಂಡವು ದಣಿವರಿಯದೆ ಕೆಲಸ ಮಾಡಿತು. ಹಲವಾರು ನಿರ್ಮಾಪಕರು ಫಿಲ್ಮ್ ಬಜಾರ್ ನಲ್ಲಿ ಭಾಗವಹಿಸಿದರು.

ಇದು ವೃತ್ತಿಜೀವನದ ಮಧ್ಯಭಾಗದ ಯಶಸ್ಸಿನ ಮಟ್ಟದ ನಿರ್ಮಾಪಕರಿಗೆ ಚಲನಚಿತ್ರವನ್ನು ಹೇಗೆ ಪಿಚ್ ಮಾಡುವುದು, ಹೇಗೆ ಬಜೆಟ್ ಮಾಡುವುದು ಮತ್ತು ಅದನ್ನು ಜಾಗತಿಕವಾಗಿ ಯಶಸ್ವಿಗೊಳಿಸುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿತ್ತು. ಈ ವರ್ಷದ ಫಿಲ್ಮ್ ಬಜಾರ್ ಹಿಂದೆಂದಿಗಿಂತ ದೊಡ್ಡದಾಗಿತ್ತು. ಫಿಲ್ಮ್ ಬಜಾರ್ ನಲ್ಲಿ ಸಾಕಷ್ಟು ಚಟುವಟಿಕೆಯಿತ್ತು. ಸುಮಾರು 2000 ಪ್ರತಿನಿಧಿಗಳು ಭಾಗವಹಿಸಿದ್ದರು.

ಆಸ್ಟ್ರೇಲಿಯಾ, ಭೂತಾನ್, ಬೆಲಾರಸ್, ಹಾಂಗ್ ಕಾಂಗ್, ಜಪಾನ್, ಕಿರ್ಗಿಸ್ತಾನ್, ರಷ್ಯಾ, ಸೌದಿ ಅರೇಬಿಯಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್ಡಮ್ ನಂತಹ ದೇಶಗಳು ವ್ಯಾಪಕ ಅಂತರರಾಷ್ಟ್ರೀಯ ಆಕರ್ಷಣೆಯನ್ನು ಪ್ರದರ್ಶಿಸಿದವು. ಈ ದೇಶಗಳು, ತಮ್ಮ ವಿಶಿಷ್ಟವಾದ ಚಲನಚಿತ್ರ ನಿರ್ಮಾಣ ಸಂಸ್ಕೃತಿಗಳು ಮತ್ತು ವಿಧಾನಗಳೊಂದಿಗೆ, ವೇಗವಾಗಿ ಬೆಳೆಯುತ್ತಿರುವ ಉದ್ಯಮದಲ್ಲಿ ಗಡಿಯಾಚೆಗಿನ ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿಹೇಳಿದವು. ಈ ವೈವಿಧ್ಯಮಯ ದೇಶಗಳ ಭಾಗವಹಿಸುವಿಕೆಯು ಅಂತರರಾಷ್ಟ್ರೀಯ ವೇದಿಕೆಯಾಗಿ ಫಿಲ್ಮ್ ಬಜಾರ್ ನ ಪಾತ್ರವನ್ನು ಎತ್ತಿ ತೋರಿಸುತ್ತದೆ, ಇದು ಸಂವಾದವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಸಿನಿಮಾದ ಬೆಳವಣಿಗೆ ಮತ್ತು ಸುಸ್ಥಿರತೆಗೆ ಕೊಡುಗೆ ನೀಡುವ ಚಲನಚಿತ್ರ ಉದ್ಯಮದ ವಿನಿಮಯವನ್ನು ಉತ್ತೇಜಿಸುತ್ತದೆ. ಚರ್ಚೆಗಳು ಚಲನಚಿತ್ರ ನೀತಿ ಅಭಿವೃದ್ಧಿ, ಚಿತ್ರೀಕರಣದ ಪ್ರೋತ್ಸಾಹಗಳು ಮತ್ತು ಚಲನಚಿತ್ರ ನಿರ್ಮಾಣದ ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದ್ದವು, ಅಂತರರಾಷ್ಟ್ರೀಯ ಮತ್ತು ಸ್ಥಳೀಯರು ಸೇರಿದಂತೆ ಭಾಗವಹಿಸುವವರೆಲ್ಲರು ಜಾಗತಿಕ ಸಿನಿಮಾದ ಭವಿಷ್ಯವನ್ನು ರೂಪಿಸಲು ಕೊಡುಗೆ ನೀಡಬಹುದು ಎಂದು ಖಚಿತಪಡಿಸಿತು.

 

ವರ್ಷದ ಅತಿದೊಡ್ಡ ಜಾಗತಿಕ ಬಿಡುಗಡೆಗಳಲ್ಲಿ ಒಂದಾದ ʼಬೆಟರ್ ಮ್ಯಾನ್ʼ ಉತ್ಸವದ ಆರಂಭಿಕ ಚಿತ್ರವಾಗಿತ್ತು. ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾತೃ ಮೈಕೆಲ್ ಗ್ರೇಸಿ ನಿರ್ದೇಶಿಸಿದ ಬ್ರಿಟಿಷ್ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಅವರ ಜೀವನಾಧಾರಿತ ಚಲನಚಿತ್ರವು ಡಿಸೆಂಬರ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರೋತ್ಸವದ ಮುಕ್ತಾಯದ ಸಿನಿಮಾ ಜೆಕ್ ನಿರ್ದೇಶಕ ಬೋಹ್ಡಾನ್ ಸ್ಲಾಮಾ ಅವರ 'ಡ್ರೈ ಸೀಸನ್' ಆಗಿತ್ತು, ಅವರು ಯುರೋಪಿಯನ್ ಚಲನಚಿತ್ರಗಳಲ್ಲಿನ ತಮ್ಮ ನವೀನ ಕೆಲಸಗಳಿಗೆ ಮತ್ತು ಸಮಾಜದಲ್ಲಿ ಕಂಡುಬರುವ ನಗರ ನಾಗರಿಕತೆಯ ಬಿಕ್ಕಟ್ಟುಗಳನ್ನು ಕುರಿತು ಸಿನಿಮಾ ಮಾಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಚಿತ್ರರಂಗದ ಅಪ್ರತಿಮರಲ್ಲಿ ಒಬ್ಬರಾದ ಫಿಲಿಪ್ ನೋಯ್ಸ್ ಅವರಿಗೆ ನೀಡಲಾಯಿತು. ಆಸ್ಟ್ರೇಲಿಯಾದ ಈ ಚಲನಚಿತ್ರ ನಿರ್ದೇಶಕರು ಬೋನ್ ಕಲೆಕ್ಟರ್, ಡೆಡ್ ಕಾಮ್, ಸ್ಲಿವರ್, ರ್ಯಾಬಿಟ್-ಪ್ರೂಫ್ ಫೆನ್ಸ್ ಮತ್ತಿತರ ಹಲವು ಸಿನಿಮಾಗಳಿಂದಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದ್ದಾರೆ. ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಸ್ವೀಕರಿಸಲು ಫಿಲಿಪ್ ನೋಯ್ಸ್ ಖುದ್ದಾಗಿ ಬಂದಿದ್ದು ಉತ್ಸವದ ಸಂಘಟಕರಿಗೆ ದೊರೆತ ಗೌರವವಾಗಿತ್ತು!

ಅಂತರರಾಷ್ಟ್ರೀಯ ಸಿನಿಮಾ ವಿಭಾಗವು ಅತ್ಯಂತ ಉತ್ಸಾಹಭರಿತವಾಗಿತ್ತು, 12 ಚಲನಚಿತ್ರಗಳು ಪ್ರತಿಷ್ಠಿತ 'ಗೋಲ್ಡನ್ ಪೀಕಾಕ್' ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.

 

55ನೇ ಐ ಎಫ್ ಎಫ್ ಐ ನಲ್ಲಿ ಅತ್ಯುತ್ತಮ ಚಿತ್ರಕ್ಕಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಸೌಲ್ ಬ್ಲೂವೆಟ್ ನಿರ್ದೇಶಿಸಿದ ಲಿಥುವೇನಿಯನ್ ಚಲನಚಿತ್ರ 'ಟಾಕ್ಸಿಕ್' ಪಡೆದುಕೊಂಡಿತು. 'ದಿ ನ್ಯೂ ಇಯರ್ ದಟ್ ನೆವರ್ ಕೇಮ್' ಚಿತ್ರಕ್ಕಾಗಿ ರೊಮೇನಿಯನ್ ನಿರ್ದೇಶಕ ಬೊಗ್ಡಾನ್ ಮುರೆಸಾನು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಫ್ರೆಂಚ್ ಚಲನಚಿತ್ರ 'ಹೋಲಿ ಕೌ' ನಲ್ಲಿನ ಸೂಕ್ಷ್ಮ ಮತ್ತು ಆಕರ್ಷಕ ಅಭಿನಯಕ್ಕಾಗಿ ಕ್ಲೆಮೆಂಟ್ ಫಾವೆ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಈ ಫ್ರೆಂಚ್ ಚಲನಚಿತ್ರದ ನಿರ್ದೇಶಕಿ ಲೂಯಿಸ್ ಕೌರ್ವೊಸಿಯರ್ ತಮ್ಮ ಚೊಚ್ಚಲ ಚಿತ್ರಕ್ಕಾಗಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಸಹ ಪಡೆದರು. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ವೆಸ್ಟಾ ಮಾಟುಲೈಟ್ ಮತ್ತು ಇವಾ ರುಪ್ಪೈಕಾಯ್ಟೆ ಅವರಿಗೆ 'ಟಾಕ್ಸಿಕ್' ಪಾತ್ರಕ್ಕಾಗಿ ಜಂಟಿಯಾಗಿ ನೀಡಲಾಯಿತು. ಅಮೇರಿಕನ್ ನಿರ್ದೇಶಕಿ ಸಾರಾ ಫ್ರೈಡ್ ಲ್ಯಾಂಡ್ ಅವರು 'ಫೆಮಿಲಿಯರ್ ಟಚ್' ಗಾಗಿ ಅತ್ಯುತ್ತಮ ಚೊಚ್ಚಲ ಫೀಚರ್ ಫಿಲ್ಮ್ ಪ್ರಶಸ್ತಿಗೆ ಭಾಜನರಾದರು.

ಈ ಬಾರಿಯ ಉತ್ಸವದಲ್ಲಿ ಆಸ್ಟ್ರೇಲಿಯಾ ದೇಶದವನ್ನು ಮುಖ್ಯವಾಗಿ ಗಮನಿಸಲಾಗಿತ್ತು. ಆಸ್ಟ್ರೇಲಿಯನ್ ಬೌಲೆವಾರ್ಡ್ ನೊಳಗೆ, ಫಿಲ್ಮ್ ಬಜಾರ್ ನಲ್ಲಿ ನಿರ್ಮಾಪಕರ ದುಂಡುಮೇಜುಗಳಿದ್ದವು. ಅಲ್ಲಿ ಸಹ-ನಿರ್ಮಾಣ ಒಪ್ಪಂದಗಳನ್ನು ಚರ್ಚಿಸಲಾಯಿತು. 2023 ರಲ್ಲಿ ಫಲಪ್ರದವಾದ ಸಹ-ಉತ್ಪಾದನಾ ಒಪ್ಪಂದಕ್ಕೆ ಆಸ್ಟ್ರೇಲಿಯಾ ಇತ್ತೀಚಿಗೆ ಸಹಿ ಹಾಕಿದೆ. ಆಸ್ಟ್ರೇಲಿಯನ್ ತಂಡವು ಸ್ಕ್ರೀನ್ ಆಸ್ಟ್ರೇಲಿಯಾದಿಂದ ಬೆಂಬಲಿತವಾದ ಪೂರ್ಣ ಬಲದೊಂದಿಗೆ ಹಾಜರಾಗಿತ್ತು ಮತ್ತು ಇಬ್ಬರು ಅದ್ಭುತ ಮಹಿಳೆಯರಾದ ಸ್ಕ್ರೀನ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ರೇನ್ ಬ್ರನ್ಸ್ಡನ್ ಮತ್ತು ಸಿಇಒ ಡೀರ್ಡ್ರೆ ಬ್ರೆನ್ನನ್ ನೇತೃತ್ವದಲ್ಲಿತ್ತು. ಆಸ್ಟ್ರೇಲಿಯಾದ ಪ್ರತಿನಿಧಿಗಳು ಪೂರ್ಣ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸಿದರು ಮತ್ತು ಅವರ ಅನೇಕ ನಿರ್ಮಾಪಕರು ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿದರು.

ಈ ವರ್ಷ 15 ಅಂತರರಾಷ್ಟ್ರೀಯ ಪ್ರೀಮಿಯರ್ ಗಳು ನಡೆದವು. 55 ನೇ ಐ ಎಫ್ ಎಫ್ ಐ ಜನಪ್ರಿಯ ತಾರೆಯರ ಚಲನಚಿತ್ರಗಳಾದ ಮನೋಜ್ ಬಾಜ್ಪೇಯಿ ಅವರ 'ಡಿಸ್ಪ್ಯಾಚ್', ಬೊಮನ್ ಇರಾನಿ ಅವರ 'ಮೆಹ್ತಾ ಬಾಯ್ಸ್' ಮತ್ತು ಇತರ ಅನೇಕ ದೇಶೀಯ ಪ್ರೀಮಿಯರ್ ಪ್ರದರ್ಶನಗಳನ್ನು ಕಂಡಿತು.

ಭಾರತದ ಹೆಸರಾಂತ ಚಲನಚಿತ್ರ ನಿರ್ಮಾತೃ ಅಶುತೋಷ್ ಗೋವಾರಿಕರ್ ನೇತೃತ್ವದ ಅಂತರರಾಷ್ಟ್ರೀಯ ತೀರ್ಪುಗಾರರ ಸಮಿತಿಯು ಜಾಗತಿಕವಾಗಿ ಹೆಸರಾಂತ ಚಲನಚಿತ್ರ ವ್ಯಕ್ತಿಗಳನ್ನು ತೀರ್ಪುಗಾರರ ಸದಸ್ಯರನ್ನಾಗಿ ಹೊಂದಿತ್ತು. ಸ್ಟ್ರಿಕ್ಟ್ಲಿ ಬಾಲ್ ರೂಂ (1992), ರೋಮಿಯೋ + ಜೂಲಿಯೆಟ್ (1996) ಮತ್ತು ಮೌಲಿನ್ ರೂಜ್ (2002) ಮತ್ತು ಶೇಖರ್ ಕಪೂರ್ ಅವರ ಸಿನಿಮಾಗಳಿಗೆ ಸಂಕಲನ ಮಾಡಿದ ಆಸ್ಕರ್-ವಿಜೇತ ಚಲನಚಿತ್ರ ಸಂಕಲನಕಾರ ಜಿಲ್ ಬಿಲ್ಕಾಕ್ ತೀರ್ಪುಗಾರ ಸಮಿತಿಯ ಸದಸ್ಯರಾಗಿದ್ದರು.

ಕೇನ್ಸ್ ಚಲನಚಿತ್ರೋತ್ಸವದ ವಿಜೇತ ಆಂಟನಿ ಚೆನ್ ಇದ್ದರು. ಸ್ಪೇನ್ ನಿಂದ ಜಾಗತಿಕ ಮಟ್ಟದಲ್ಲಿ ಸ್ವತಂತ್ರ ಸಿನೆಮಾದ ಹೊಸ ಧ್ವನಿಗಳಲ್ಲಿ ಒಂದಾದ ಫ್ರಾನ್ ಬೋರ್ಗಿಯಾ ಮತ್ತು ಬ್ರಿಟಿಷ್ ಚಲನಚಿತ್ರ ನಿರ್ಮಾಪಕ, ಹಲವು ಬಾರಿ BAFTA ಪ್ರಶಸ್ತಿಗಳನ್ನು ಗೆದ್ದ ಎಲಿಜಬೆತ್ ಕಾರ್ಲ್ಸನ್ ಸಹ ಅಂತರರಾಷ್ಟ್ರೀಯ ತೀರ್ಪುಗಾರರ ಸಮಿತಿಯಲ್ಲಿದ್ದರು.

ಚಲನಚಿತ್ರೋತ್ಸವದ ಪ್ರಮುಖ ಭಾಗವೆಂದರೆ ಮಾಸ್ಟರ್ ಕ್ಲಾಸ್. ಇದನ್ನು ಚಲನಚಿತ್ರ ಪ್ರಪಂಚದ ಹೆಸರಾಂತರು ನಡೆಸಿಕೊಟ್ಟರು. ಇವರಲ್ಲಿ ಫಿಲಿಪ್ ನೋಯ್ಸ್, ಆಸ್ಟ್ರೇಲಿಯನ್ ಅಕಾಡೆಮಿ ಪ್ರಶಸ್ತಿ-ವಿಜೇತ ಛಾಯಾಗ್ರಾಹಕ ಜಾನ್ ಸೀಲ್ - ಇವರು 'ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್', 'ದಿ ಇಂಗ್ಲಿಷ್ ಪೇಷಂಟ್' ಚಿತ್ರಗಳಿಗೆ ಛಾಯಾಗ್ರಾಹಕರು ಮತ್ತು ದಿ ಅವೆಂಜರ್ಸ್ನ ಸೃಷ್ಟಿಕರ್ತರಾದ ಅನಿಮೇಷನ್ ನಿರ್ದೇಶಕ ಕ್ರಿಸ್ ಕಿರ್ಷ್ಬಾಮ್ ಸೇರಿದ್ದರು.

ಸಂಗೀತ ದಂತಕಥೆ ಎ ಆರ್ ರೆಹಮಾನ್ ಅವರು ಮಾಸ್ಟರ್ ಕ್ಲಾಸ್ ಅನ್ನು ಉದ್ದೇಶಿಸಿ ಮಾತನಾಡಿದರು. ಈ ವರ್ಷದ ಲತಾ ಮಂಗೇಶ್ಕರ್ ಸ್ಮಾರಕ ಉಪನ್ಯಾಸವನ್ನೂ ನೀಡಿದರು. ರೆಹಮಾನ್ ನಿರ್ಮಿಸಿದ ಸಂಗೀತ ಸಾಕ್ಷ್ಯಚಿತ್ರವಾದ 'ಹೆಡ್ ಹಂಟಿಂಗ್ ಟು ಬೀಟ್ ಬಾಕ್ಸಿಂಗ್' ಚಿತ್ರೋತ್ಸವದಲ್ಲಿ ಏಷ್ಯಾದ ಪ್ರಥಮ ಪ್ರದರ್ಶನವನ್ನು ಸಹ ಹೊಂದಿತ್ತು.

ವಿಧು ವಿನೋದ್ ಚೋಪ್ರಾ ತಮ್ಮ 'ಟ್ವೆಲ್ತ್ ಫೇಲ್' ಚಿತ್ರದ ಬಗ್ಗೆ ಮಾತನಾಡಿದರು, ಇದನ್ನು ಆಡಿಯೊ ವಿವರಣೆ ಮತ್ತು ಸಂಕೇತ ಭಾಷೆಯ ವ್ಯಾಖ್ಯಾನದೊಂದಿಗೆ ತೋರಿಸಲಾಯಿತು. ಅನುಪಮ್ ಖೇರ್ ಅವರು ಮಾಸ್ಟರ್ ಕ್ಲಾಸ್ ನಲ್ಲಿ 'ವೈಫಲ್ಯದ ಶಕ್ತಿ' ಕುರಿತು ಮಾತನಾಡಿದರು. ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ದಶಕಗಳ ಅನುಭವವಿರುವ ಅವರಲ್ಲದೆ ಈ ಬಗ್ಗೆ ಮತ್ತಾರು ಮಾತನಾಡಲು ಸಾಧ್ಯ? ಚರ್ಚಾ ಗೋಷ್ಠಿಗಳು ಉತ್ತಮವಾಗಿದ್ದವು.

ನಾನು 'ಮಹಿಳಾ ಸುರಕ್ಷತೆ ಮತ್ತು ಸಿನಿಮಾ' ಎಂಬ ಗೋಷ್ಠಿಯನ್ನು ನಿರ್ವಹಿಸಿದೆ. ಇದರಲ್ಲಿ ಖ್ಯಾತನಾಮರಾದ ಇಮ್ತಿಯಾಜ್ ಅಲಿ, ಸುಹಾಸಿನಿ ಮಣಿರತ್ನಂ, ಭೂಮಿ ಪೆಡ್ನೇಕರ್ ಮತ್ತು ಖುಷ್ಬೂ ಸುಂದರ್ ಭಾಗವಹಿಸಿದ್ದರು. ಇದು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ಸ್ಥಳಗಳು, ಪ್ರಪಂಚದ ಎಲ್ಲೆಡೆ ನಡೆಯುವ ಚಲನಚಿತ್ರಗಳಲ್ಲಿ ಮಹಿಳೆಯರ ವಸ್ತುನಿಷ್ಠತೆ ಮತ್ತು ಚಿತ್ರರಂಗದಲ್ಲಿ ಮಹಿಳೆಯರಿಗೆ ಹೇಗೆ ಸಶಕ್ತ ಪಾತ್ರಗಳು ಇಂದು ಸಾಮಾನ್ಯವಾಗಿದೆ ಎಂಬುದನ್ನು ಅನ್ವೇಷಿಸಿತು. ಬೊಡ್ಡಿಬೇಡಿ ಅವರು ನಿರ್ವಹಿಸಿದ ಮತ್ತೊಂದು ಚರ್ಚಾ ಗೋಷ್ಠಿಯಲ್ಲಿ, ಖ್ಯಾತ ಬರಹಗಾರ ಫರೂಖ್ ಧೋಂಡಿ, ಸಾಕ್ಷ್ಯಚಿತ್ರ ನಿರ್ಮಾಪಕ ಲೂಸಿ ವಾಕರ್, ಸ್ಪ್ಯಾನಿಷ್ ನಿರ್ಮಾಪಕಿ ಅನ್ನಾ ಸೌರಾ, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಟ ತನ್ನಿಸ್ತಾ ಚಟರ್ಜಿ ಮತ್ತು ನಾನು 'ಪ್ರಯಾಣಿಸುವ ಕಥೆಗಳು', ಅಂದರೆ ಗಡಿಗಳಿಲ್ಲದ ಸಿನಿಮಾದ ಬಗ್ಗೆ ಮಾತನಾಡಲು ಒಟ್ಟಿಗೆ ಸೇರಿದ್ದೆವು.

ಜ್ಞಾನ ಸರಣಿಯಲ್ಲಿ, ನಟ ಅಭಿಷೇಕ್ ಬ್ಯಾನರ್ಜಿ ಮತ್ತು ನಿರ್ದೇಶಕ ಅಮರ್ ಕೌಶಿಕ್ ಪ್ರತಿನಿಧಿಸಿದ 'ಸ್ತ್ರೀ 2' ತಂಡ ಮತ್ತು ಆಸ್ಕರ್ ಗೆ ನಾಮನಿರ್ದೇಶನಗೊಂಡ 'ಲಾಪತಾ ಲೇಡೀಸ್' ಚಲನಚಿತ್ರದ ಯುವಕರೊಂದಿಗೆ ಮಧ್ಯಪ್ರದೇಶ ರಾಜ್ಯ ತಂಡವು ಪೂರ್ಣ ಪ್ರಮಾಣದಲ್ಲಿ ಬಂದಿತು. ರಾಜ್ಯದ ಚಲನಚಿತ್ರ ನೀತಿಗಳು ತಮ್ಮ ಚಲನಚಿತ್ರಗಳನ್ನು ಮಧ್ಯಪ್ರದೇಶದಲ್ಲಿ ಚಿತ್ರೀಕರಿಸಲು ಯುವ ಚಲನಚಿತ್ರ ನಿರ್ಮಾಪಕರನ್ನು ಹೇಗೆ ಪ್ರೋತ್ಸಾಹಿಸುತ್ತಿವೆ ಎಂಬುದನ್ನು ಅವರು ವಿವರಿಸಿದರು.

ಐ ಎಫ್ ಎಫ್ ಐ ಉದ್ಘಾಟನಾ ಸಮಾರಂಭದಲ್ಲಿ ಪ್ರಸಾರ ಭಾರತಿ ತನ್ನ ಒಟಿಟಿ ಪ್ಲಾಟ್ಫಾರ್ಮ್ 'ವೇವ್ಸ್' ಅನ್ನು ಪ್ರಾರಂಭಿಸಿತು. ಇದು ವೈವಿಧ್ಯಮಯ ಭಾರತೀಯ ಕಂಟೆಂಟ್ ಅನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ವಿ ಎಫ್ ಎಕ್ಸ್ ಮತ್ತು ಟೆಕ್ ಪೆವಿಲಿಯನ್, ಫಿಕ್ಕಿಯಿಂದ ಬೆಂಬಲಿತವಾಗಿತ್ತು. ಇದು ಚಿತ್ರೋತ್ಸವದ ಮತ್ತೊಂದು ಕೇಂದ್ರಬಿಂದುವಾಗಿತ್ತು. ಪ್ರಮುಖ ಅಂತರರಾಷ್ಟ್ರೀಯ ಉದ್ಯಮ ನಾಯಕರನ್ನು ಆಕರ್ಷಿಸಿತು. ಈ ಪೆವಿಲಿಯನ್ ಚಲನಚಿತ್ರ ನಿರ್ಮಾಣವನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನದ ಪಾತ್ರಕ್ಕೆ ಸಾಕ್ಷಿಯಾಯಿತು. ಹೊಸ ಆವಿಷ್ಕಾರಗಳ ಮೂಲಕ ಸಿನಿಮಾ ಅನುಭವಗಳ ಭವಿಷ್ಯದ ಒಂದು ನೋಟವನ್ನು ನೀಡಿತು. ನೆಟ್ ಫ್ಲಿಕ್ಸ್, ಸೋನಿ ಮತ್ತು ಇತರ ಮಾರುಕಟ್ಟೆಯ ನಾಯಕರು ತಮ್ಮ ಕೊಡುಗೆಗಳು ಮತ್ತು ಉತ್ಪನ್ನಗಳನ್ನು ಟೆಕ್ ಪೆವಿಲಿಯನ್ ನಲ್ಲಿ ಪ್ರಸ್ತುತಪಡಿಸಿದರು.

ಉತ್ಸವವು ವಿಶೇಷ ಅಗತ್ಯವುಳ್ಳ ಜನರಿಗೆ ವಿಶೇಷ ಸೌಲಭ್ಯಗಳನ್ನು ಹೊಂದಿತ್ತು, ಉದಾಹರಣೆಗೆ ಪ್ರಾರಂಭ ಮತ್ತು ಸಮಾರೋಪ ಸಮಾರಂಭಗಳು, ಪತ್ರಿಕಾಗೋಷ್ಠಿಗಳು ಮತ್ತು ಅಧಿವೇಶನಗಳಲ್ಲಿ ಸಂಕೇತ ಭಾಷಾ ವ್ಯಾಖ್ಯಾನಕಾರರು. ದೃಷ್ಟಿದೋಷ ಮತ್ತು ಶ್ರವಣದೋಷವುಳ್ಳವರಿಗಾಗಿ 'ಟ್ವೆಲ್ತ್ ಫೇಲ್' ನಂತಹ ಮುಖ್ಯವಾಹಿನಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.

ಕೇನ್ಸ್ನಲ್ಲಿ ಪಾಯಲ್ ಕಪಾಡಿಯಾ ಅವರ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಕಳೆದ ವರ್ಷ ಭಾರತ ಗೆದ್ದ ಆಸ್ಕರ್ ಪ್ರಶಸ್ತಿಗಳೊಂದಿಗೆ ಭಾರತವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಉತ್ಸವವು ಸೃಷ್ಟಿಸಬಹುದಾದ ಹೊಸ ಜಾಗತಿಕ ಕಥೆಗಳನ್ನು ಸಂಭ್ರಮಿಸುವ ಸಮಯ ಇದಾಗಿದೆ.

ಮುಂದಿನ ವರ್ಷ ಭಾರತದ ಚಲನಚಿತ್ರ ಪ್ರೇಮಿಗಳು ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾತೃಗಳಿಗೆ ಉತ್ಸವವು ಹೆಚ್ಚು ರೋಮಾಂಚಕ ಮತ್ತು ಉತ್ತೇಜಕವಾಗಿರುತ್ತದೆ ಎಂದು ಭಾವಿಸುತ್ತೇವೆ.

(ಲೇಖಕರು ನಟಿ, ನಿರ್ಮಾಪಕಿ, ಭಾರತದ 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಚಾಲನಾ ಸಮಿತಿ ಸದಸ್ಯೆ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾಣಿ ತ್ರಿಪಾಠಿ ಟಿಕೂ

contributor

Similar News