ಸೋಲಿನ ಕಾರ್ಮೋಡಗಳ ನಡುವೆ ಬೆಳ್ಳಿ ಕಿರಣಗಳು
ಹಿಂದಿ ಚಿತ್ರರಂಗಕ್ಕೆ 2024 ಕಠಿಣ ವರ್ಷವಾಗಿತ್ತು. 2023ರಲ್ಲಿ ಬಂದ ಬ್ಲಾಕ್-ಬಸ್ಟರ್ ಚಿತ್ರಗಳ ಆನಂತರ ನಿರೀಕ್ಷೆ ಹೆಚ್ಚಾಯಿತು. ‘ಸಾಮಾನ್ಯ’ ಹಿಟ್ ಗಳನ್ನು ನೀಡಲೂ ಉದ್ಯಮವು ಹೆಣಗಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಥೆಗಳಲ್ಲಿನ ಸತ್ತ್ವಹೀನತೆ ಎನ್ನುವುದು ಸಿನಿಮಾ ಪಂಡಿತರ ಅಭಿಪ್ರಾಯ. 2023ರಲ್ಲಿ ಸ್ಟಾರ್ ನಟರಿದ್ದ ಹಲವು ಸಿನೆಮಾಗಳು ಗೆದ್ದಿವೆ, ಆದರೆ ಈ ವರ್ಷ ನಟರ ಸ್ಥಾನಮಾನಗಳನ್ನು ಅವಗಣಿಸಿ, ಪ್ರೇಕ್ಷಕರು ಕಥೆಗೇ ಪ್ರಾಶಸ್ತ್ಯ ನೀಡಿದಂತಿದೆ. ಈ ಕಾರಣಕ್ಕಾಗಿ, 2024ರ ದೊಡ್ಡ ನಟರ ಸಿನೆಮಾಗಳು, ಕತೆ, ಚಿತ್ರ-ಕಥೆೆಯ ದೌರ್ಬಲ್ಯದಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸಲು ವಿಫಲವಾಗಿದೆ.
ಆಗಸ್ಟ್‌ನಲ್ಲಿ ಬಿಡುಗಡೆಗೊಂಡ ಅಮರ್ ಕೌಶಿಕ್ ನಿರ್ದೇಶನದ ‘ಸ್ತ್ರೀ 2 - ಸರ್ಕಟೇ ಕಾ ಆತಂಕ್’ ಸಿನೆಮಾ ಹಿಂದಿಯಲ್ಲಿ ಗೆದ್ದ ಚಿತ್ರವಾಗಿ ಗುರುತಿಸಲ್ಪಟ್ಟಿದೆ. ವರ್ಷಾಂತ್ಯದ ತನಕ ರೂ. 627 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿದೆ. ನವೆಂಬರ್‌ನಲ್ಲಿ ಬಿಡುಗಡೆಗೊಂಡ ಅನೀಸ್ ಬಾಝ್ಮೀ ನಿರ್ದೇಶಿಸಿರುವ ‘ಭೂಲ್ ಭುಲೈಯಾ 3’ ಚಿತ್ರ ರೂ 278.42 ಕೋಟಿ ಗಳಿಸಿದೆ. ನವೆಂಬರ್ ನಲ್ಲೇ ಬಂದ ರೋಹಿತ್ ಶೆಟ್ಟಿ ನಿರ್ದೇಶನದ ಅಜಯ್ ದೇವಗನ್ ಸಿನೆಮಾ ‘ಸಿಂಗಂ- ಅಗೆಯ್ನ್’ (ರೂ. 268.35 ಕೋಟಿ ಗಳಿಕೆ), ‘ಫೈಟರ್’ (ರೂ. 205.55 ಕೋಟಿ) ಹಾಗೂ ’ಶೈತಾನ್’ (ರೂ. 149.49 ಕೋಟಿ) ಹಾಗೂ ‘ಮುಂಜ್ಯಾ’ (ರೂ. 107.48 ಕೋಟಿ) ನೂರು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಚಿತ್ರಗಳಾಗಿವೆ.
ಗಲ್ಲಾಪೆಟ್ಟಿಗೆಯಲ್ಲಿ ‘ಸುಂಟರಗಾಳಿ’ ಎಬ್ಬಿಸುವ ನಿರೀಕ್ಷೆ ಹುಟ್ಟಿಸಿದ್ದ ಸಿನೆಮಾಗಳಲ್ಲಿ ಒಂದು ಆಲಿಯಾ ಭಟ್ ನಟಿಸಿರುವ ‘ಜಿಗ್ರಾ’. ಆಲಿಯಾ ಭಟ್ ನೀಡಿದ ಅತ್ಯುತ್ತಮ ನಟನೆಯ ಹೊರತಾಗಿಯೂ ಚಿತ್ರ ಕೇವಲ ರೂ. 30.69 ಕೋಟಿ ಗಳಿಸಿದೆ. ಸ್ಟಾರ್ ನಟರಾದ ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ಇಬ್ಬರ ಜೋಡಿಯ ‘ಬಡೇ ಮಿಯಾಂ ಛೋಟೇ ಮಿಯಾಂ’ ಕೂಡ ನಿರೀಕ್ಷೆ ಹುಸಿ ಮಾಡಿತು. ಇದು ಕೇವಲ ರೂ. 102.16 ಕೋಟಿ ಗಳಿಸಿದೆ. ಅಕ್ಷಯ ಕುಮಾರ್ ಸಿನೆಮಾ ‘ಸರ್ಫೀರಾ’ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರೂ, ಸಿನೆಮಾ ಗಳಿಸಿದ್ದು ರೂ. 22.13 ಕೋಟಿ ಮಾತ್ರ. ಈ ವರ್ಷ ಅತ್ಯಂತ ಕಡಿಮೆ ದುಡ್ಡು ಮಾಡಿರುವ ಇನ್ನಿತರ ಚಿತ್ರಗಳು, ‘ದೋ ಔರ್ ದೋ ಪ್ಯಾರ್’ (ರೂ. 4.63 ಕೋಟಿ), ‘ಸಾವೀ’ (ರೂ. 7.97 ಕೋಟಿ), ‘ಉಲಝ್’ (ರೂ. 8.3 ಕೋಟಿ), ‘ಮೈಂ ಅಟಲ್ ಹೂಂ ’(ರೂ. 8.65 ಕೋಟಿ) ಹಾಗೂ ‘ದ ಬಕಿಂಗ್ಹ್ಯಾಮ್ ಮರ್ಡರ್ಸ್’ (ರೂ. 9.27 ಕೋಟಿ).
ವಿಶೇಷವೆಂದರೆ ಬಾಲಿವುಡ್ ಇದೀಗ ದಕ್ಷಿಣ ಭಾರತವನ್ನು ನೆಚ್ಚಿಕೊಳ್ಳುತ್ತಿದೆ. ದಕ್ಷಿಣ ಭಾರತದ ನಟರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡರೆ, ಬಾಲಿವುಡ್ ನಟರು ದಕ್ಷಿಣ ಭಾರತದತ್ತ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ವರ್ಷ ದೇಶದೆಲ್ಲೆಡೆ ಅತ್ಯಂತ ಹೆಚ್ಚು ಹಣಗಳಿಕೆಯ ಶ್ರೇಯ ಪಡೆದುಕೊಂಡಿರುವುದು ಇತ್ತೀಚಿಗೆ ಬಿಡುಗಡೆಗೊಂಡು ಇನ್ನೂ ಓಡುತ್ತಿರುವ, ಈಗಾಗಲೇ ರೂ. 1478 ಕೋಟಿಗೂ ಮೀರಿ ಗಳಿಸಿರುವ ತೆಲುಗು ಚಿತ್ರ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’. ಎರಡನೆಯ ಸ್ಥಾನದಲ್ಲಿ ಪ್ರಭಾಸ್ ಅಭಿನಯದ ’ಕಲ್ಕಿ 2898 ಎಡಿ’. ರೂ. 1052.5 ಕೋಟಿ ಗಳಿಸಿ ‘ಬ್ಲಾಕ್-ಬಸ್ಟರ್’ ಅನ್ನಿಸಿದೆ. ಕನ್ನಡದಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿರುವ ಚಿತ್ರ ಉಪೇಂದ್ರ ಅಭಿನಯಿಸಿರುವ ‘ಯುಐ’. ಇನ್ನೂ ಓಡುತ್ತಿರುವ ಈ ಚಿತ್ರ ಸದ್ಯಕ್ಕೆ ರೂ. 34.8 ಕೋಟಿ ಗಳಿಸಿದೆ. ಸುದೀಪ್ ಅಭಿನಯದ ’ಮ್ಯಾಕ್ಸ್’ ಕನ್ನಡದ ಇನ್ನೊಂದು ‘ಬ್ಲಾಕ್-ಬಸ್ಟರ್’ ಚಿತ್ರವಾಗುವ ಲಕ್ಷಣ ಹೊಂದಿದೆ.
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಚಿತ್ರಗಳು 2024ರ ವಿಶೇಷವಾಗಿದೆ. ಇದರಿಂದಾಗಿ ಭಾರತೀಯ ಗಲ್ಲಾಪೆಟ್ಟಿಗೆ ಮರುವ್ಯಾಖ್ಯಾನಕ್ಕೊಳಗಾಗುತ್ತಿದೆ ಮತ್ತು ಪ್ರೇಕ್ಷಕರನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಒಟ್ಟುಗೂಡಿಸುತ್ತಿದೆ. ಇದಕ್ಕೊಂದು ಉದಾಹರಣೆಯಾಗಿ ಕಂಡುಬಂದದ್ದು ಕನ್ನಡದ ‘ಬ್ಲಿಂಕ್’ ಚಿತ್ರ. ಒಂದೇ ಬಾರಿ ಐದಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ತಯಾರಿಸಲ್ಪಟ್ಟ ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’, ಮೇರು ಕಲಾವಿದರು ಇಲ್ಲದೆಯೂ ಜನಪ್ರಿಯಗೊಂಡಿದೆ. ವಿಶಿಷ್ಟ ಕಥೆ, ಸಂಗೀತಗಳೆರಡೂ ಯಶಸ್ಸಿಗೆ ಕಾರಣವೆನಿಸಿವೆ.
ಭಾರತೀಯ ಚಲನಚಿತ್ರೋದ್ಯಮಕ್ಕೆ ಕಲಾತ್ಮಕ ಚಿತ್ರಗಳನ್ನು ನೀಡಿದ ಪ್ರಸಿದ್ಧ ನಿರ್ದೇಶಕರದ ಶ್ಯಾಮ್ ಬೆನೆಗಲ್ (90), ಬರಹಗಾರ ಎಂಟಿ ವಾಸುದೇವನ್ ನಾಯರ್ (91), ಗಾಯಕ ಪಂಕಜ್ ಉಧಾಸ್ (72), ಮಲಯಾಳಂ ಚಲನಚಿತ್ರಗಳಲ್ಲಿ ಖಳ ಪಾತ್ರಕ್ಕೆ ಹೆಸರುವಾಸಿಯಾದ ಮೇಘನಾಥನ್ (60), ದೆಹಲಿ ಗಣೇಶ್ (83), ತಮಿಳು ಚಿತ್ರರಂಗದ ಹಿರಿಯ ಪೋಷಕ ನಟ; ಚಿತ್ರಕಥೆ ಬರಹಗಾರ ಕುಮಾರ್ ಶಹಾನಿ (83); ಬಾಲನಟಿ, ಮಾಡೆಲ್ ಆಗಿದ್ದ ಸುಹಾನಿ ಭಟ್ನಾಗರ್ (19) ಸೇರಿ ಬಹಳ ಮಂದಿ ಕಲಾವಿದರನ್ನು ಕಳಕೊಂಡಿದೆ.
ಲೈಂಗಿಕ ಕಿರುಕುಳದ ಆರೋಪ ವರ್ಷದುದ್ದಕ್ಕೂ ಸಿನೆಮಾ ಕ್ಷೇತ್ರವನ್ನು ಬೆಂಬತ್ತಿಬಂದಿದೆ. ಮಲಯಾಳಂ ಚಿತ್ರರಂಗ ಈ ಆರೋಪದ ಕೇಂದ್ರವಾಗಿದ್ದರೂ, ನಿಧಾನಕ್ಕೆ ಬೇರೆ ಬೇರೆ ಭಾಷೆಯ ಚಿತ್ರರಂಗಕ್ಕೂ ಆರೋಪಗಳು ವಿಸ್ತರಿಸಿದವು. ಕೇರಳದಲ್ಲಿ ಹೇಮಾ ಕಮಿಟಿ ನೀಡಿದ ವರದಿಯು ಮಲಯಾಳಂ ಚಿತ್ರೋದ್ಯಮವನ್ನು ಅಲುಗಾಡಿಸಿತು. ಹಲವು ಜನಪ್ರಿಯ ನಟರು ಪೊಲೀಸರ ವಿಚಾರಣೆಯನ್ನು ಎದುರಿಸಬೇಕಾಯಿತು. ಚಿತ್ರಕಲಾವಿದರ ಒಕ್ಕೂಟ ‘ಅಮ್ಮ’ದ ಉನ್ನತ ಪದಾಧಿಕಾರಿಗಳು ರಾಜೀನಾಮೆ ನೀಡಿದರು.
ತೆಲುಗು ನಟ ಅಲ್ಲು ಅರ್ಜುನ್ ಸಿನೆಮಾ ‘ಪುಷ್ಪಾ 2’ ನೋಡುವ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲು, ಸಂಧ್ಯಾ ಚಿತ್ರ ಮಂದಿರದಲ್ಲಿ ಕಾಲ್ತುಳಿತಕ್ಕೆ ಕಾರಣವಾಯಿತು. ದುರಂತದಲ್ಲಿ ಮಹಿಳೆಯೊಬ್ಬಳು ಮರಣ ಹೊಂದಿರುವುದು ಸಿನೆಮಾರಂಗಕ್ಕೆ ಆಘಾತವನ್ನುಂಟು ಮಾಡಿದೆ. ಜೊತೆಗೆ, ನ್ಯಾಯಾಲಯ ಅರ್ಜುನ್ ಅವರನ್ನು ಜವಾಬ್ದಾರರನ್ನಾಗಿಸಿದೆ. ನಟ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ರೇಣುಕಾಸ್ವಾಮಿಯೆನ್ನುವ ತನ್ನ ಅಭಿಮಾನಿಯನ್ನು ಹತ್ಯೆಗೈದಿರುವ ಆರೋಪ ಎದುರಿಸಿ ಕನ್ನಡ ನಟ ದರ್ಶನ್ ಜೈಲು ಸೇರಿದ್ದು 2024ರಲ್ಲಿ. ಕಂಗನಾ ರಣಾವತ್ ಚಳವಳಿಗಿಳಿದ ರೈತರ ಬಗ್ಗೆ ಕಟುವಾಗಿ ನುಡಿದು ಚಂಡಿಗಡದಲ್ಲಿ ಭದ್ರತಾ ಸಿಬ್ಬಂದಿಯೋರ್ವಳ ಕೈಯಲ್ಲಿ ಕಪಾಳಮೋಕ್ಷವನ್ನು ಅನುಭವಿಸಬೇಕಾಯಿತು. ಇದೇ ಸಂದರ್ಭದಲ್ಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಂಗನಾ ಸಂಸತ್ ಪ್ರವೇಶಿಸಿದರು.
2025ರಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಕಂಗನಾ ರಣಾವತ್ ನಟಿಸಿರುವ ‘ಎಮರ್ಜೆನ್ಸಿ’ ಚಿತ್ರವಿದೆ. ಅದು ಈಗಾಗಲೇ ಅನೇಕ ಬಾರಿ, ಬಿಡುಗಡೆಗೆ ತಡೆಯನ್ನನುಭವಿಸಿದೆ, ಜೊತೆಗೆ ದೃಶ್ಯಗಳನ್ನು ತೆಗೆದುಹಾಕಬೇಕೆಂಬ ‘ತಗಾದೆ’ಯನ್ನೂ ಎದುರಿಸಿದೆ. ‘ದ ಕಂದಹಾರ್ ಹೈಜ್ಯಾಕ್’ - 1999ರಲ್ಲಿ ನೇಪಾಳದಿಂದ ಹೊರಟು ಹೊಸದಿಲ್ಲಿಗೆ ಹೋಗುತ್ತಿದ್ದಾಗ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನದ ಕಥೆಯ ಬಗ್ಗೆ ಅಂತರ್‌ರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳೆದ್ದಿವೆ. ಅಲ್ಲದೆ, ಜೂನ್ ತಿಂಗಳಲ್ಲಿ ‘ಮಹಾರಾಜ’ದ ಬಿಡುಗಡೆಗೆ ಧಾರ್ಮಿಕ ವಿಚಾರಗಳ ನೆಲೆಯಲ್ಲಿ ಗುಜರಾತ್ ಮುಖ್ಯ ನ್ಯಾಯಾಲಯ ತಡೆಯಿತಾದರೂ, ನಿರ್ಮಾಪಕರು ತಡೆಯನ್ನು ಪ್ರಶ್ನಿಸಿದಾಗ ಈ ತಡೆಯಾಜ್ಞೆಯನ್ನು ಹಿಂದೆಗೆದುಕೊಳ್ಳಲಾಯಿತು.
ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಈ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಎಲ್ಲರ ಮೆಚ್ಚುಗೆ ಗಳಿಸಿದ ‘ಲಾಪತಾ ಲೇಡೀಸ್’ ಚಿತ್ರ ಆಸ್ಕರ್ ಪ್ರಶಸ್ತಿಗಳ ಕೊನೆಯ ಮಟ್ಟಕ್ಕೆ ಏರಲಾಗದಿದ್ದದ್ದು ಜನರಿಗೆಲ್ಲಾ ನಿರಾಶೆ ಹುಟ್ಟಿಸಿತು.
‘ದಿಸ್ ಮೂವ್ಮೆಂಟ್’ ಅನ್ನುವ ತಮ್ಮ ಕಲಾತ್ಮಕ ಕೃತಿಗೆ ದಿವಂಗತ ಉಸ್ತಾದ್ ಝಾಕಿರ್ ಹುಸೈನ್ ಹಾಗೂ ಸಂಗೀತ ನಿರ್ದೇಶಕ ಶಂಕರ್ ಮಹದೇವನ್ ‘ಗ್ರ್ಯಾಮೀ ಪ್ರಶಸ್ತಿ 2024’ ಗೆದ್ದಿದ್ದಾರೆ. ಚಿದಾನಂದ ಎಸ್. ನಾಯಕರ ‘ಸನ್ ಫ್ಲವರ್ಸ್ ವೆರ್ ದ ಫರ್ಸ್ಟ್ ಟು ನೋ’ ಎಂಬ ಕನ್ನಡ ಕಿರುಚಿತ್ರ ಈ ವರ್ಷದ ’ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆಯಿತು. ಅಲ್ಲದೆ, ಹಾಸ್ಯಪಾತ್ರ ಕಲಾವಿದರಾದ ವೀರ್ ದಾಸ್ ಅಮೇರಿಕದ ‘ಅಂತರ್‌ರ್ರಾಷ್ಟ್ರೀಯ ಎಮ್ಮಿ ಪ್ರಶಸ್ತಿ 2024’ರ ಸಂಯೋಜಕರಾದದ್ದು, ಮಾತ್ರವಲ್ಲ, ಭಾರತದ ಕಲಾವಿದರೊಬ್ಬರು ಈ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರೀಯ ಪ್ರಶಸ್ತಿ ಚಿತ್ರಗಳು
► ಅತ್ಯುತ್ತಮ ಚಲನಚಿತ್ರ:
‘ಆಟಮ್’ (ಮಲಯಾಳಂ)
► ಅತ್ಯುತ್ತಮ ಜನಪ್ರಿಯ ಚಿತ್ರ:
‘ಕಾಂತಾರ’ (ಕನ್ನಡ)