ಬೆಂಗಳೂರು | ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಕಿರುತೆರೆ ನಟನ ಬಂಧನ

Update: 2024-12-27 14:10 GMT

ನಟ ಚರಿತ್ ಬಾಳಪ್ಪ (Photo credit: news9live.com)

ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಕಿರುತೆರೆ ನಟನನ್ನು ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಿರುಕುಳಕ್ಕೆ ಒಳಗಾದ ಯುವತಿ ಕಿರುತೆರೆ ನಟಿಯಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ನಟ ಚರಿತ್ ಬಾಳಪ್ಪ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ನಾಯಂಡಹಳ್ಳಿಯಲ್ಲಿ ವಾಸವಾಗಿದ್ದ ಆರೋಪಿ ಮೂಲತಃ ಮಂಗಳೂರಿನವನಾಗಿದ್ದು, ಕನ್ನಡದ ಮುದ್ದುಲಕ್ಷ್ಮೀ ಸೇರಿ ತೆಲುಗಿನ ಅನೇಕ ಧಾರವಾಹಿಗಳಲ್ಲಿ ನಟನಾಗಿ ಗುರುತಿಸಿಕೊಂಡಿದ್ದ. ಕಳೆದ ವರ್ಷ ದೂರುದಾರ ಯುವತಿಯನ್ನು ಪರಿಚಯಿಸಿಕೊಂಡಿದ್ದ ಚರಿತ್, ಕಾಲಕ್ರಮೇಣ ಆಕೆಯೊಂದಿಗೆ ಸಲುಗೆಯಿಂದ ಓಡಾಡಿಕೊಂಡಿದ್ದ.

ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ ಯುವತಿಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈತನ ಪ್ರೀತಿಗೆ ಯುವತಿ ನಿರಾಕರಿಸಿದ್ದಳು. ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಒತ್ತಾಯಿಸಿದ್ದು, ಇದಕ್ಕೆ ಒಪ್ಪದಿದ್ದಾಗ ಜೀವ ಬೆದರಿಕೆ ಹಾಕಿದ್ದಾನೆ" ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

ಇನ್ನೂ, ದೈಹಿಕ ಸಂಪರ್ಕ ಇಟ್ಟುಕೊಳ್ಳಲು ನಿರಾಕರಿಸಿದರೆ ಖಾಸಗಿ ಫೋಟೊ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಗ್ರೂಪ್‍ಗಳಿಗೆ ಹರಿಬಿಡುವುದಾಗಿ ಬೆದರಿಕೆವೊಡ್ಡಿದ್ದ. ತನಗೆ ರಾಜಕಾರಣಿಗಳ ಹಾಗೂ ಪೊಲೀಸರ ಬಲವಿದ್ದು, ಸುಳ್ಳು ಪ್ರಕರಣ ದಾಖಲಿಸಿ ಸಾಯುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಹಲ್ಲೆ ಮಾಡಿರುವುದಾಗಿ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ವಿವಾಹಿತನಾಗಿರುವ ಚರಿತ್, ಕೆಲ ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಚೇದನ ಪಡೆದುಕೊಂಡಿದ್ದ. ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಪತ್ನಿ ಕಳುಹಿಸಿದ್ದ ನೋಟಿಸ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಸರ್ಜಾಪುರ ಠಾಣೆಯಲ್ಲೂ ಈತನ ವಿರುದ್ಧ ದೂರು ದಾಖಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News