ಸನ್ಮಾನ ಕಾರ್ಯಕ್ರಮಕ್ಕೆಂದು ಆಹ್ವಾನಿಸಿ ನಟ ಮುಷ್ತಾಕ್ ಖಾನ್ ರ ಅಪಹರಣ; 12 ಗಂಟೆಗಳ ಕಾಲ ಚಿತ್ರಹಿಂಸೆ
ಮೀರತ್: ʼವೆಲ್ಕಮ್(Welcome)ʼ ಚಿತ್ರದ ಮೂಲಕ ನಟನೆಗೆ ಮನೆ ಮಾತಾಗಿದ್ದ ಚಲನಚಿತ್ರ ನಟ ಮುಷ್ತಾಕ್ ಖಾನ್ ಅವರನ್ನು ಅಪಹರಿಸಿ, ಗಂಟೆಗಟ್ಟಲೆ ಚಿತ್ರಹಿಂಸೆ ನೀಡಿ 2 ಲಕ್ಷ ನೀಡುವಂತೆ ಬಲವಂತ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ನವೆಂಬರ್ 20ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಮುಷ್ತಾಕ್ ಖಾನ್ ಅವರು ನವೆಂಬರ್ 15ರಂದು ರಾಹುಲ್ ಸೈನಿ ಎಂಬಾತನಿಂದ ಕರೆ ಸ್ವೀಕರಿಸಿದ್ದಾರೆ. ಕರೆಯಲ್ಲಿ ಮೀರತ್ನಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ತೆರಳುವ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಯುಪಿಐ ಮೂಲಕ 25,000 ವರ್ಗಾವಣೆ ಮಾಡಿ ಬಾಕಿ ಹಣವನ್ನು ನಂತರ ನೀಡುವುದಾಗಿ ಹೇಳಲಾಗಿತ್ತು. ಕರೆ ಮಾಡಿದಾತ ಮುಷ್ತಾಕ್ ಖಾನ್ ಗೆ ವಿಮಾನ ಟಿಕೆಟ್ ಕೂಡ ಕಳುಹಿಸಿಕೊಟ್ಟಿದ್ದಾನೆ.
ಮುಷ್ತಾಕ್ ಖಾನ್ ದಿಲ್ಲಿಗೆ ಬಂದಿಳಿದು ರಾಹುಲ್ ಸೈನಿ ಕಳುಹಿಸಿದ ಕ್ಯಾಬ್ ಅನ್ನು ಹತ್ತಿದ್ದಾರೆ. ಈ ವೇಳೆ ಚಾಲಕನಲ್ಲದೆ ಮತ್ತೋರ್ವ ವ್ಯಕ್ತಿ ಕೂಡ ಕಾರಿನಲ್ಲಿದ್ದ. ಸ್ವಲ್ಪ ಮುಂದಕ್ಕೆ ತೆರಳುತ್ತಿದ್ದಂತೆ ಕಾರನ್ನು ನಿಲ್ಲಿಸಿ ಮತ್ತೊಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ನಟನಿಗೆ ತಿಳಿಸಲಾಗಿದೆ. ಈ ವೇಳೆ ಕಾರಿನಲ್ಲಿ ಮತ್ತಿಬ್ಬರು ಕೂಡ ಇದ್ದರು. ಖಾನ್ ಗೆ ಸಂಶಯ ಬಂದು ಪ್ರಶ್ನಿಸಿದಾಗ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿ ನಂತರ ಅವರನ್ನು ಬಿಜ್ನೋರ್ ಬಳಿ ಇರುವ ನಗರದ ಹೊರವಲಯದ ಮನೆಯೊಂದಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ. ಬಳಿಕ ಅಪಹರಣಕಾರರು ಮದ್ಯಪಾನ ಮಾಡಲು ಪ್ರಾರಂಭಿಸಿದ್ದು, ಮುಂಜಾನೆ ವೇಳೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವೇಳೆ ನಟ ತಪ್ಪಿಸಿಕೊಂಡು ಪಕ್ಕದ ಮಸೀದಿಗೆ ತೆರಳಿದ್ದಾರೆ. ಆ ಬಳಿಕ ಮಸೀದಿ ಧರ್ಮ ಗುರುವಿನ ಸಹಕಾರದಿಂದ ಕುಟುಂಬವನ್ನು ಸಂಪರ್ಕಿಸಿದ್ದಾರೆ.
“ಅಪಹರಣಕಾರರು ಖಾನ್ ಗೆ ಸರಿಸುಮಾರು 12 ಗಂಟೆಗಳ ಕಾಲ ಕಿರುಕುಳ ನೀಡಿದ್ದು, ಒಂದು ಕೋಟಿ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆ ಒಟ್ಟಿದ್ದಾರೆ. ಇದೇ ವೇಳೆ ಅವರು ಖಾನ್ ಹಾಗೂ ಪುತ್ರನ ಬ್ಯಾಂಕ್ ಖಾತೆಗಳಿಂದ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಮುಂಜಾನೆ ಅಝಾನ್ ಕೇಳಿದಾಗ, ಸಮೀಪದಲ್ಲೇ ಮಸೀದಿಯೊಂದು ಇದೆ ಎಂದು ಅರ್ಥ ಮಾಡಿಕೊಂಡ ಖಾನ್, ಅಲ್ಲಿಂದ ಪರಾರಿಯಾಗಿದ್ದಾರೆ” ಎಂದು ಮುಷ್ತಾಖ್ ಖಾನ್ ರ ವ್ಯಾಪಾರದ ಪಾಲುದಾರ ಶಿವಂ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಮುಷ್ತಾಕ್ ಖಾನ್ ಅವರು ಬಿಜ್ನೋರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.