ಏಳನೆ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಲಯಾಳಂ ಹಿರಿಯ ನಟ ಇಂದ್ರನ್ಸ್
ತಿರುವನಂತಪುರಂ: ಏಳನೆ ತರಗತಿಗೆ ಸಮನಾದ ಪರೀಕ್ಷೆಯಲ್ಲಿ ಮಲಯಾಳಂ ನಟ ಇಂದ್ರನ್ಸ್ ತೇರ್ಗಡೆಯಾಗಿದ್ದಾರೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಆಯೋಜಿಸಿದ್ದ ಏಳನೆ ತರಗತಿಗೆ ಸಮನಾದ ಪರೀಕ್ಷೆಯಲ್ಲಿ ಅವರು 500 ಅಂಕಗಳ ಪೈಕಿ 297 ಅಂಕ ಗಳಿಸಿದ್ದಾರೆ. ಶುಕ್ರವಾರ ಈ ಫಲಿತಾಂಶ ಪ್ರಕಟವಾಗಿದೆ.
ಸ್ನೇಹಿತರ ಒತ್ತಾಯಕ್ಕೆ ಮಣಿದು, 2023ರಲ್ಲಿ ಏಳನೆ ತರಗತಿಗೆ ಸಮನಾದ ಪರೀಕ್ಷೆ ತೆಗೆದುಕೊಳ್ಳಲು 68 ವರ್ಷದ ಇಂದ್ರನ್ಸ್ ಸರಕಾರಿ ಶಾಲೆ, ವೈದ್ಯಕೀಯ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದರು. ಇಂದ್ರನ್ಸ್ ಗೆ ತಾನೆಷ್ಟನೆ ತರಗತಿವರೆಗೆ ವ್ಯಾಸಂಗ ಮಾಡಿದ್ದೇನೆ ಎಂದು ತಿಳಿದಿರದಿದ್ದರೂ, ಅವರು 4ನೇ ತರಗತಿ ತೇರ್ಗಡೆಯಾಗಿರುವುದನ್ನು ಸಾಕ್ಷರತಾ ಮಿಷನ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು.
ನಾನು ಚಿತ್ರೀಕರಣದ ವಿರಾಮದ ವೇಳೆ ವ್ಯಾಸಂಗ ಮಾಡಿದ್ದೆ ಎಂದು ಇಂದ್ರನ್ಸ್ ಹೇಳಿದ್ದಾರೆ. ಅವರೀಗ ಹತ್ತನೆ ತರಗತಿಗೆ ಸಮನಾದ ಪರೀಕ್ಷೆಗೆ ಹಾಜರಾಗಲು ಯೋಜಿಸುತ್ತಿದ್ದಾರೆ. ಅವರಿಗೆ ಸಾಕ್ಷರತಾ ಪ್ರೇರಕ್ ವಿಜಯಲಕ್ಷ್ಮಿ ಕೂಡಾ ನೆರವು ನೀಡಿದ್ದಾರೆ. “10ನೇ ತರಗತಿಯಲ್ಲಿ ಇನ್ನೂ ಹೆಚ್ಚು ವಿಷಯಗಳಿರುತ್ತವೆ ಎಂದು ನನಗೆ ತಿಳಿಸಲಾಗಿದೆ. ಆದರೆ, ನಾನೊಂದು ಪ್ರಯತ್ನ ಪಡಲು ಇಷ್ಟಪಡುತ್ತೇನೆ” ಎಂದು ಇಂದ್ರನ್ಸ್ ಹೇಳಿದ್ದಾರೆ.
ಇಂದ್ರನ್ಸ್ ಗೆ ಹಿಂದಿ ಅತ್ಯಂತ ಕಠಿಣ ವಿಷಯ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ. “ಚಿತ್ರೀಕರಣದಲ್ಲಿ ಯಾವಾಗೆಲ್ಲ ವಿರಾಮ ದೊರೆಯುತ್ತಿತ್ತೊ, ಆಗೆಲ್ಲ ಅವರು ವ್ಯಾಸಂಗ ಮಾಡುತ್ತಿದ್ದರು. ಹಿಂದಿ ಅವರ ಪಾಲಿಗೆ ಕೊಂಚ ಕಠಿಣ ವಿಷಯವಾಗಿದೆ. ಅವರು ಮೊಮ್ಮಗಳು ಅವರಿಗೆ ಹಿಂದಿ ಕಲಿಕೆಗೆ ನೆರವು ನೀಡುತ್ತಿದ್ದಾಳೆ. ಉಳಿದ ವಿಷಯಗಳಲ್ಲಿ, ವಿಶೇಷವಾಗಿ ಮಲಯಾಳಂನಲ್ಲಿ ಅವರು ನಿಜಕ್ಕೂ ಉತ್ತಮವಾಗಿದ್ದಾರೆ” ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ನಾನು 4ನೇ ತರಗತಿಯ ನಂತರ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ ಎಂದು ಇಂದ್ರನ್ಸ್ ತಮ್ಮ ಸ್ನೇಹಿತರ ಬಳಿ ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ, ಅವರು ಏಳನೆ ತರಗತಿಗೆ ಸಮನಾದ ಪರೀಕ್ಷೆಯನ್ನು ತೆಗೆದುಕೊಳ್ಳಲು ಮುಂದಾದಾಗ, ಅವರ ಸಹಪಾಠಿಗಳು ಹಾಗೂ ಹಳೆಯ ಸ್ನೇಹಿತರು ಅವರನ್ನು ಉತ್ತೇಜಿಸಿದ್ದರು.
ಅಟ್ಟಕುಲಂಗಾರ ಕೇಂದ್ರೀಯ ಶಾಲೆಯಲ್ಲಿ ಇಂದ್ರನ್ಸ್ ಪರೀಕ್ಷೆ ಬರೆದಿದ್ದರು.