ಸ್ಯಾಂಡಲ್‌ವುಡ್:‌ ಲೈಂಗಿಕ ದೌರ್ಜನ್ಯ ಕುರಿತ ತನಿಖೆಗೆ ಸಮಿತಿ ರಚಿಸಲು ಸಿಎಂಗೆ ಕಲಾವಿದರ ಪತ್ರ

Update: 2024-09-04 14:25 GMT

ಬೆಂಗಳೂರು: ನ್ಯಾಯಾಮೂರ್ತಿ ಹೇಮ ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ನಡೆದಿರುವ ಲೈಂಗಿಕ ಕಿರುಕುಳದ ಕುರಿತು ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳ ತನಿಖೆ ನಡೆಸಲು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ (ಫೈರ್) ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಬುಧವಾರ ‘ಫೈರ್’ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದು, ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಬೇಕು. ಕನ್ನಡ ಚಿತ್ರರಂಗದಲ್ಲಿ ಎಲ್ಲ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣ ಸೃಷ್ಟಿಸಲು ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದೆ.

ತನಿಖಾ ಸಮಿತಿಯ ನೇತೃತ್ವವನ್ನು ವಹಿಸಲು ತಮ್ಮ ಜೀವನದ ಉದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಸಮಿತಿಯು ಮೂರು ತಿಂಗಳಲ್ಲಿ ವರದಿಯನ್ನು ಸಲ್ಲಿಸಬೇಕು. ಈ ತನಿಖೆಗೆ ಅಗತ್ಯವಾದಲ್ಲಿ ಸಹಾಯ ಮಾಡಲು ಅಥವಾ ಸಂಪರ್ಕ ಕೊಂಡಿಯಾಗಿರಲು ಸಂಸ್ಥೆ ನೆರವಾಗಲಿದೆ ಎಂದು ತಿಳಿಸಿದೆ.

ಸಂಸ್ಥೆಯ ಬೇಡಿಕೆಗೆ ಕನ್ನಡ ಚಲನಚಿತ್ರ ನಟ, ನಟಿಯರು, ಕಲಾವಿದರು, ಬರಹಗಾರರು, ಸಾಹಿತಿಗಳು, ಪ್ರಗತಿಪರರು ಸೇರಿದಂತೆ 153 ಮಂದಿ ಗಣ್ಯರು ಬೆಂಬಲ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News