ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ ಬಡ್ಡಿ ದಂಧೆಕೋರರ ಕಿರುಕುಳ: ಎಫ್‍ಐಆರ್ ದಾಖಲು

Update: 2024-06-28 18:04 GMT

ಪುಷ್ಕರ್ ಮಲ್ಲಿಕಾರ್ಜುನಯ್ಯ (Photo:X)

ಬೆಂಗಳೂರು: ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಡಿ ಸಿಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

ಕೆಲವು ಸಿನಿಮಾಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದೆ ಹಾಗು ಕೋವಿಡ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, 2019ರಲ್ಲಿ ತಮ್ಮ ಸಂಬಂಧಿ ಆದರ್ಶ್ ಡಿ.ಬಿ. ಎಂಬವರಿಂದ ಸಾಲ ಪಡೆದಿದ್ದರು. 2019ರಿಂದ 2023ರ ನವೆಂಬರ್‍ವರೆಗೆ ಹಂತ ಹಂತವಾಗಿ ಒಟ್ಟು 5 ಕೋಟಿ ರೂ. ಪಡೆದಿದ್ದ ಅವರು, ಪ್ರತಿ ತಿಂಗಳು ಶೇ.5ರಂತೆ ಬಡ್ಡಿ ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರು. ಭದ್ರತೆಗಾಗಿ ತಮ್ಮ ಖಾತೆಯ 10 ಖಾಲಿ ಚೆಕ್‍ಗಳನ್ನು ನೀಡಿದ್ದರು ಎಂದು ತಿಳಿದುಬಂದಿದೆ.

ತಾವು ಪಡೆದುಕೊಂಡಿದ್ದ 5 ಕೋಟಿ ರೂ.ಗೆ ಪ್ರತಿಯಾಗಿ ಅಸಲು, ಬಡ್ಡಿಸಮೇತ ಇದುವರೆಗೂ ಒಟ್ಟು 11.50 ಕೋಟಿ ರೂ. ಪಾವತಿಸಿದ್ದರು. ಆದರೆ, ಪಾವತಿಸಿರುವ ಹಣ ಕೇವಲ ಬಡ್ಡಿ ಹಾಗೂ ಚಕ್ರಬಡ್ಡಿಗೆ ಸರಿಯಾಗುತ್ತದೆ. ಇನ್ನೂ 13 ಕೋಟಿ ರೂ. ನೀಡಬೇಕು ಎಂದು ಆದರ್ಶ್ ಬೇಡಿಕೆಯಿಟ್ಟಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ದೂರಿದ್ದಾರೆ.

ಆದರ್ಶ್, ಹರ್ಷ ಸಿ., ಶಿವು, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ.

ಆದರ್ಶ್ ಮತ್ತು ಹರ್ಷ ಸಿ., ಶಿವು, ಹರ್ಷ ಡಿ.ಬಿ. ಅವರು ಲೇವಾದೇವಿ ವ್ಯವಹಾರ ಮಾಡಲು ಸಹಕಾರ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದುಕೊಳ್ಳದೆ, ಸಾರ್ವಜನಿಕರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪುಷ್ಕರ್, ಸಹಕಾರ ಸಂಘದ ಉಪ ನಿಬಂಧಕರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ಈ ದೂರಿನನ್ವಯ ಕಾನೂನು ತನಿಖೆ ನಡೆಸುವಂತೆ ಉಪ ನಿಬಂಧಕರಾದ ಕಿಶೋರ್ ಕುಮಾರ್ ಎಂಬವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳ ವಿರುದ್ಧ ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾಜಿರ್ಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಜೀವ ಬೆದರಿಕೆ ಆರೋಪದಡಿ ಸಿಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News