‘ಸಿ.ಒ.ಡಿ.ಪಿ’ ಯ ಸುವರ್ಣ ಮಹೋತ್ಸವದ ಪ್ರಯುಕ್ತ ಬಡವರ ಗೃಹ ನಿರ್ಮಾಣ, ದುರಸ್ಥಿಗೆ 1 ಕೋಟಿ 18 ಲಕ್ಷ ಧನಸಹಾಯ

Update: 2023-08-04 09:08 GMT

ಮಂಗಳೂರು: ಕೆನರಾ ಅಭಿವೃದ್ದಿ ಮತ್ತು ಶಾಂತಿ ಸಂಸ್ಥೆ (ಸಿ.ಒ.ಡಿ.ಪಿ.) ಸಂಸ್ಥೆಯ ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಭಿಸಿರುವ 100 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ "ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಾಜದ ಅಶಕ್ತ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ ನೀಡುವುದರ ಮೂಲಕ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಶ್ರೀ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ" ಎಂದು ಅಭಿಪ್ರಾಯಪಟ್ಟರು.

ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಮುಖ್ಯ ಅತಿಥಿಯಾಗಿ ಹಾಜರಿದ್ದು " ಮೈಕಲ್ ಜತೆಗೆ ನನ್ನ ಒಡನಾಟ ಕಳೆದ 45 ವರ್ಷಗಳದ್ದು. ನನಗೆ ದೇವರು ಅಗತ್ಯ ಇರುವುದಕ್ಕೂ ಮಿಕ್ಕಿ ಕೊಟ್ಟಿರುವುದರಿಂದ, ಅದನ್ನು ಕಷ್ಟದಲ್ಲಿರುವವರ ಜತೆ ಹಂಚಿಕೊಳ್ಳಬೇಕಾದ್ದು ನನ್ನ ಧರ್ಮ. ಮೈಕಲ್ ರಂತಹ ಹತ್ತು ಜನರು ನಮ್ಮ ಸಮಾಜದಲ್ಲಿದ್ದಿದ್ದರೆ ಇಂದು ಈ ಹಂತದ ಬಡತನ ಇರುತ್ತಿರಲಿಲ್ಲ" ಎಂದು ಶ್ಲಾಘಿಸಿದರು.

ಪ್ರಸಕ್ತ ವರ್ಷದಲ್ಲಿ ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಅನಿವಾಸಿ ಉದ್ಯಮಿ/ ದಾನಿ ಮೈಕಲ್ ಡಿ’ ಸೊಜಾ ಒಂದು ಕೋಟಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದು, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಂದು ಸಿ.ಒ.ಡಿ.ಪಿ. ನಿರ್ದೇಶಕ ವಂ| ವಿನ್ಸೆಂಟ್ ಡಿಸೊಜಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಕಲ್ ಡಿ’ಸೊಜಾರವರ ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿ’ಸಿಲ್ವ, ಕಾರ್ಯಕ್ರಮದ ಸಂಯೋಜಕರಾದ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷರಾದ ಜ್ಯೋ ಕುವೆಲ್ಹೊ, ವಂ| ಆಸ್ಟಿನ್ ಪೆರಿಸ್, ವಂ| ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News