ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಕೋಮುವಾದಿಗಳಿಗೆ ಶರಣಾಗಿದೆ: ಮುನೀರ್ ಕಾಟಿಪಳ್ಳ
ಮಂಗಳೂರು: ʼದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕೋಮುವಾದದ ಎದುರು ಶರಣಾಗಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕತ್ವದೊಂದಿಗೆ ಅನೈತಿಕ ಮೈತ್ರಿ ಸಾಧಿಸಿದೆʼ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.
ಸಿಪಿಐಎಂ ಗುರುಪುರ ವಲಯ ಸಮ್ಮೇಳನದ ಪ್ರಯುಕ್ತ ಕುಪ್ಪೆಪದವಿನಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ʼಸಂಘ ಪರಿವಾರ ಸೃಷ್ಟಿಸಿದ ಮತೀಯ ಧ್ರುವೀಕರಣ, ದ್ವೇಷದ ರಾಜಕಾರಣದ ಅವಕಾಶ ಪಡೆದು ಸುಲಭದ ಗೆಲುವು ಸಾಧಿಸಿರುವ ಜಿಲ್ಲೆಯ ಬಿಜೆಪಿ ಶಾಸಕರುಗಳು, ತುಳುನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿಯನ್ನೇ ಎತ್ತುತ್ತಿಲ್ಲ. ರಸ್ತೆ ದುರಸ್ತಿ, ಗುಂಡಿ ಮುಚ್ಚುವುದು, ನಿರ್ಮಾಣ ಹಂತದ ಹೆದ್ದಾರಿ ಕಾಮಗಾರಿಗಳಂತಹ ಕನಿಷ್ಟ ಪ್ರಶ್ನೆಗಳನ್ನೂ ಅವರು ಪರಿಹರಿಸುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ, ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸ್ಥಾಪನೆ, ಮೀನುಗಾರಿಕೆ, ವಸತಿ ಯೋಜನೆಯಂತಹ ಜ್ವಲಂತ ಸಮಸ್ಯೆಗಳು ಅವರ ಪಟ್ಟಿಯಲ್ಲೇ ಇಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಉತ್ತರ ಕ್ಷೇತ್ರ ಗಂಭೀರ ಸಮಸ್ಯೆಗಳಲ್ಲಿ ಬಳಲುತ್ತಿದ್ದರೂ ಜನರ ಸಮಸ್ಯೆಗಳನ್ನು ಆಲಿಸಲೂ ಸಿದ್ಧರಿಲ್ಲದ ಶಾಸಕ ಭರತ್ ಶೆಟ್ಟಿ ಅವರು ಕೋಮು ದ್ವೇಷದ ಹೇಳಿಕೆಗಳಿಗಷ್ಟೆ ಸೀಮಿತರಾಗಿದ್ದಾರೆ. ಇದೀಗ ಹೊಂಡ-ಗುಂಡಿಗಳಿಂದ ತುಂಬಿರುವ ಸುರತ್ಕಲ್ ಹೆದ್ದಾರಿ ಹಾಗೂ ಅಸ್ತಿಪಂಜರದ ಮಾದರಿ ಅರ್ಧದಲ್ಲೆ ನಿಂತಿರುವ ಸುರತ್ಕಲ್ ಮಾರುಕಟ್ಟೆ ಕಟ್ಟಡದ ಮುಂಭಾಗದಲ್ಲೆ "ಆಹಾರ ಮೇಳ" ಆಯೋಜಿಸುತ್ತಿರುವುದು ಬಿಜೆಪಿ ಶಾಸಕರುಗಳ ಭಂಡತನಕ್ಕೆ ಸಾಕ್ಷಿ. ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇಂತಹ ಸಂದರ್ಭ ಬಿಜೆಪಿ ಶಾಸಕರ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಿ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆಯ ಜೊತೆ ನಿಲ್ಲಬೇಕಿತ್ತು. ಆದರೆ, ಜಿಲ್ಲೆಯ ಕಾಂಗ್ರೆಸ್ ಪಕ್ಷ ಕೋಮುವಾದದ ಎದುರು ಶರಣಾಗಿದೆ. ಬಿಜೆಪಿ, ಸಂಘಪರಿವಾರದ ನಾಯಕತ್ವದೊಂದಿಗೆ ಅನೈತಿಕ ಮೈತ್ರಿ ಸಾಧಿಸಿದೆ. ಹುಲಿ ಕುಣಿತ, ಪುತ್ತೂರಿನ ವಿಎಚ್ ಪಿ ಕಾರ್ಯಕ್ರಮ ಸಹಿತ ಹಲವು ಕಾರ್ಯಕ್ರಮಗಳಲ್ಲಿ ಯಾವ ಮುಜುಗರವೂ ಇಲ್ಲದೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ, ಜನ ಸಾಮಾನ್ಯರ ಹಿತಾಸಕ್ತಿಗಳ ವಿರುದ್ಧ ನಿಂತಿದ್ದಾರೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.
ಇವರ ಒಡನಾಟ ಎಷ್ಟು ಅತಿಗೆ ತಲುಪಿದೆ ಅಂದರೆ, ಬಿಜೆಪಿ ಯಾರು, ಕಾಂಗ್ರೆಸ್ ಯಾರು ಎಂದು ಗುರುತಿಸಲು ಅಸಾಧ್ಯ ಎಂಬಂತಾಗಿದೆ. ಕಾಂಗ್ರೆಸ್, ಬಿಜೆಪಿಯ ಈ ಅನೈತಿಕ ಮೈತ್ರಿ ಇಲ್ಲಿನ ಆಳುವ ವರ್ಗ, ವ್ಯಾಪಾರಿ ಹಿತಾಸಕ್ತಿಗಳನ್ನು ಪ್ರಶ್ನಾತೀತಗೊಳಿಸಿದೆ. ಇದರಿಂದ ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದ್ದು, ಸಿಪಿಐಎಂ ಪಕ್ಷ ಇದನ್ನು ಸವಾಲಾಗಿ ಸ್ವೀಕರಿಸಿದ್ದು ಜನತೆಯ ಪರ ನಿಂತು ಹೋರಾಟ ನಡೆಸಲಿದೆ, ಕಾಂಗ್ರೆಸ್ ಎಚ್ಚೆತ್ತುಕೊಂಡು ತನ್ನ ನಡೆಯನ್ನು ತಿದ್ದಿಕೊಳ್ಳದಿದ್ದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬಹಿರಂಗ ಸಭೆಗೂ ಮುನ್ನ, ಸಮ್ಮೇಳನದ ಪ್ರತಿನಿಧಿ ಅಧಿವೇಶನ ನಡೆದ ನಾರಾಯಣ ಗುರು ಸಮುದಾಯ ಮಂದಿರದಿಂದ ಕುಪ್ಪೆಪದವು ಪೇಟೆಯವರಗೆ ಸಿಪಿಐಎಂ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಸಭೆಯ ಅಧ್ಯಕ್ಷತೆಯನ್ನು ರಾಜೇಶ್ ನಾಯ್ಕ್ ಇರುವೈಲು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ. ಕೃಷ್ಣಪ್ಪ ಕೊಂಚಾಡಿ, ವಲಯ ಕಾರ್ಯದರ್ಶಿ ಸದಾಶಿವ ದಾಸ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಸಂತಿ ಕುಪ್ಪೆಪದವು, ಎನ್ ಎ ಹಸನಬ್ಬ ವೇದಿಕಯಲ್ಲಿ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ಚಾಗತಿಸಿ, ನೋಣಯ್ಯ ಗೌಡ ವಂದಿಸಿದರು.