ನಿಫಾ ವೈರಸ್, ಡೆಂಗಿ ಬಗ್ಗೆ ಆತಂಕ ಬೇಡ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಡೆಂಗಿ, ನಿಫಾ ವೈರಸ್ ಮತ್ತಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಈ ರೋಗಗಳ ಲಕ್ಷಣ, ಹರಡುವಿಕೆ, ನಿಯಂತ್ರಣ ಸೇರಿದಂತೆ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡಲು ಮುಂದಾಗಬೇಕು ಎಂದು ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತಂತೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಫಾ ವೈರಸ್ ಬಗ್ಗೆ ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಮನೆ ಬಳಿ ಬಾವಲಿಗಳು ಇದ್ದರೆ ಎಚ್ಚರಿಕೆ ವಹಿಸಬೇಕು. ಪಕ್ಷಿಗಳು ಕಚ್ಚಿರುವ ಹಣ್ಣಗಳನ್ನು ಬಳಸಬಾರದು. ಹಣ್ಣುಗಳನ್ನು ತೊಳೆದು ಉಪಯೋಗಿಸಬೇಕು. ಜ್ವರ ಬಂದರೆ ಅದಕ್ಕೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದರು.
ನಿಫಾ ವೈರಸ್ ರೋಗಲಕ್ಷಣದ ಬಗ್ಗೆ ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ವೈದ್ಯಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಜನಸಾಮಾನ್ಯರಿಗೆ ತಿಳಿಸಬೇಕು. ಅರಣ್ಯ ಇಲಾಖೆಯೊಂದಿಗೂ ಹೊಂದಾಣಿಕೆ ಮಾಡಿಕೊಂಡು ಫ್ರೂಟ್ ಬಾವಲಿಗಳ ಇರುವಿಕೆಯ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಡಿಸಿ ಸೂಚಿಸಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಎಲ್ಲಾ ಮೆಡಿಕಲ್ ಕಾಲೇಜುಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿರಬೇಕು. ಸೂಕ್ತ ಐಸೋಲೇಶನ್ ವಾರ್ಡುಗಳನ್ನು ಕಾಯ್ದಿರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಔಷಧೀಯ ದಾಸ್ತಾನಿನೊಂದಿಗೆ ಜ್ವರದ ಸಮೀಕ್ಷೆ ಮಾಡಬೇಕು ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣದಂತೆ ಡೆಂಗಿ ನಿಯಂತ್ರಣ ಮಾಡುವುದು ಮುಖ್ಯವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸೊಳ್ಳೆ ಉತ್ಪತಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.
ಡೆಂಗಿ ನಿಯಂತ್ರಣದ ಕುರಿತು ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಜಾಗೃತಿ ಮೂಡಿಸಬೇಕು. ಲಾರ್ವನಾಶಕ ಸಿಂಪಡಣೆ ಕುರಿತು ಕ್ರಿಯಾಯೋಜನೆ ತಯಾರಿಸಿ ಸಮಸ್ಯಾತ್ಮಕ ಪ್ರದೇಶವನ್ನು ಗುರು ತಿಸಿ ಲಾರ್ವ ನಾಶ ಮಾಡಬೇಕು. ಡೆಂಗಿ ಪ್ರಕರಣ ಕಂಡು ಬಂದ ತಕ್ಷಣ ದೂಮೀಕರಣ, ಲಾರ್ವ ನಾಶ ಸಿಂಪಡಣೆ ಮತ್ತು ಲಾರ್ವ ಸಮೀಕ್ಷೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಡಾ. ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್, ಪ್ರೊಬೆಷನರಿ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಯ ಪ್ರಭಾರ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಾಧಿ ಕಾರಿ ಡಾ. ಸುದರ್ಶನ್ ಸಿಎಂ, ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್ ಇದರ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ಎಂ, ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಶಾನುಭೋಗ್, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್, ಜಿಲ್ಲಾ ರೋಗವಾಹಕ ಆಶ್ರತ ರೋಗಳ ನಿಯಂತ್ರ ಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.