ಹೊಂಡಗುಂಡಿಗಳಿಂದ ತುಂಬಿದ ಕಾನ - ತೋಕೂರು ರಸ್ತೆ: ಡಿವೈಎಫ್‌ಐ, ಆಟೋರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ

Update: 2023-11-09 16:58 GMT

ಸುರತ್ಕಲ್, ನ.9: ಸಂಪೂರ್ಣ ಹದಗೆಟ್ಟಿರುವ ಕಾನ - ತೋಕೂರು ಎಂಎಸ್‌ಇಝೆಡ್‌ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ, ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸುತ್ತಿರುವ ಎಂಆರ್ಪಿಎಲ್‌ ಮತ್ತು ಎಂಎಸ್‌ಇಝೆಡ್‌ ಸಂಸ್ಥೆಗಳ ಬೇಜವಾಬ್ದಾರಿಯನ್ನು ವಿರೋಧಿಸಿ ಕಾನ- ತೋಕೂರು ಆಟೋರಿಕ್ಷಾ ಚಾಲಕರ ಸಂಘ ಮತ್ತು ಡಿವೈಎಫ್‌ಐ ಸುರತ್ಕಲ್ ಘಟಕದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮಂಗಳೂರಲ್ಲಿ ತೈಲಾಗಾರ, ವಿಶೇಷ ಆರ್ಥಿಕ ವಲಯ ಬಂದರೆ ಗ್ರಾಮ ಮತ್ತು ಮಂಗಳೂರು ನಗರ ಅಭಿವೃದ್ಧಿಯಾಗುತ್ತದೆ ಎಂದು ನೆಲ, ಜಲ ಮತ್ತು ಭಾವನಾತ್ಮಕ ಸಂಬಂದಗಳನ್ನು ತ್ಯಾಗ ಮಾಡಿದ ಜನರಿಗೆ ದಮ್ಮು-ಕೆಮ್ಮು ರೋಗಗಳನ್ನು ಕೊಟ್ಟಿದ್ದು ಬಿಟ್ಟರೆ ಕನಿಷ್ಠ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಾಗದ ಎಂಆರ್ಪಿಎಲ್‌ ಮತ್ತು ಎಂಎಸ್‌ಇಝೆಡ್‌ ಮಂಗಳೂರಿಗೆ ಒಂದು ಶಾಪದಂತೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನ - ತೋಕೂರು ರಸ್ತೆಯ ಬೃಹತ್ ಗುಂಡಿಗಳಿಂದಾಗಿ ದ್ವಿಚಕ್ರ ವಾಹನಗಳು ದಿನ ನಿತ್ಯ ಅಪಘಾತಕ್ಕೊಳಗಾಗಿ ಸವಾರರ ಸಾವು- ನೋವು ಸಂಭವಿಸುತ್ತಿದೆ. ಎಂಆರ್ಪಿಎಲ್‌ ಮತ್ತು ಎಂಎಸ್‌ಇಝೆಡ್‌ ಕೈಗಾರಿಕೆಗಳಿಗೆ ಬರುವ ಬೃಹತ್ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆ ಹಾಳಾಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ. ಮುಂದಿನ ಹದಿನೈದು ದಿನಗಳಲ್ಲಿ ರಸ್ತೆ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕೈಗಾರಿಕೆಗಳಿಗೆ ಬರುವ ಎಲ್ಲಾ ವಾಹನಗಳನ್ನು ತಡೆದು ತೀವ್ರ ರೀತಿಯ ಪ್ರತಿಭಟನೆ ನಡೆಲಾಗುವುದು ಎಂದು ಅವರು ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದರು.

ಸಿಪಿಎಂ ಸುರತ್ಕಲ್ ಶಾಖಾ ಕಾರ್ಯದರ್ಶಿ ಶ್ರೀನಾಥ್ ಕುಲಾಲ್, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಬಷೀರ್ ಮಾತನಾಡಿದರು. ಡಿವೈಎಫ್ಐ ಸುರತ್ಕಲ್ ಘಟಕ ಅಧ್ಯಕ್ಷ ಬಿ.ಕೆ. ಮಕ್ಸೂದ್, ಜಿಲ್ಲಾ ಸಮಿತಿ ಸದಸ್ಯರಾದ ಶೈಫರ್ ಆಲಿ ಚೊಕ್ಕಬೆಟ್ಟು, ಸಾದಿಕ್ ಕಿಲ್ಪಾಡಿ ಇಮ್ತಿಯಾಝ್ ಕುಳಾಯಿ, ಮುನೀಬ್, ಶಮೀರ್, ರಿಕ್ಷಾಚಾಲಕರ ಸಂಘದ ಪ್ರಮುಖರಾದ ಗಣೇಶ್, ಲಕ್ಷ್ಮೀಶ್ ಅಂಚನ್, ಸುಧೀರ್ ಕೋಡಿಕೆರೆ, ಮೆಲ್ವಿನ್ ಪಿಂಟೋ, ಹಂಝ ಮೈಂದಗುರಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕರ್ ಬಾವ ಜೋಕಟ್ಟೆ, ನಾಗರಿಕ ಸಮಿತಿಯ ಇಕ್ಬಾಲ್ ಜೋಕಟ್ಟೆ, ಮೆಹಬೂಬ್ ಖಾನ್, ಜಗದೀಶ್ ಕಾನ, ಫ್ರಾನ್ಸಿಸ್ ಕಾನ, ಲಾರಿ ಚಾಲಕರ ಸಂಘದ ಆರಿಫ್, ಅಸ್ಕರ್ ಆಲಿ ಜನತಾ ಕಾಲನಿ ಮೊದಲಾದವರು ಉಪಸ್ಥಿತರಿದ್ದರು.








 


 


 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News