ದೇಶದ್ರೋಹ ಎಂದು ಪರಿಗಣಿಸಿ ʼಸುವರ್ಣ ನ್ಯೂಸ್ʼ ವಿರುದ್ಧ ಕಾನೂನು ಕ್ರಮವಾಗಬೇಕು : ಮುನೀರ್ ಕಾಟಿಪಳ್ಳ

Update: 2024-05-11 10:39 GMT

ಮಂಗಳೂರು: ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿರುವ ಬಗ್ಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ 'ಕಣ್ತಪ್ಪಿನಿಂದ' ತಪ್ಪಾಗಿದೆ ಎಂದು ಸಮಜಾಯಿಷಿ ನೀಡಿರುವ ಬಗ್ಗೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾನ್ಯ ಅಜಿತ್ ಹನುಮಕ್ಕನವರ್, ಇದು ಕಣ್ತಪ್ಪಿನಿಂದ ಆದ ತಪ್ಪೂ ಅಲ್ಲ, ವಿಷಾದದಿಂದ ಮುಗಿಯುವಂತದ್ದಲ್ಲ. ಭಾರತದ ಮುಸಲ್ಮಾನರಿಗೆ "ಪಾಕ್ ಧ್ವಜ" ವೂ ಹಿಂದುಗಳಿಗೆ ಭಾರತದ ರಾಷ್ಟ್ರ ಧ್ವಜವನ್ನೂ ಹಾಕಿರುವುದು ನಿಮ್ಮ (ಸುವರ್ಣ ವಾಹಿನಿ ಹಾಗೂ ಅಜಿತ್) ಮನಸ್ಥಿತಿಯ ಅನಾವರಣ ಅಷ್ಟೆ ಅಲ್ಲ, ಅದೊಂದು ದುರುದ್ದೇಶ ಪೂರ್ವಕ ಕೃತ್ಯ, ಭಾರತೀಯ ಮುಸ್ಲಿಮರ ಮೇಲಿನ ಸಂಘಟಿತ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಸಂಕೇತಗಳು, ಅದರ ಜೊತೆಗಿನ ನಂಜು ಭರಿತ ಸತತ ಸುದ್ದಿಗಳ ಮೂಲಕ ನೀವು ಭಾರತದ ಮುಸಲ್ಮಾನರನ್ನು "ಅನ್ಯ" ರನ್ನಾಗಿಸುವ "ರಾಜಕಾರಣ" ವನ್ನು ಯಶಸ್ವಿಯಾಗಿ ಮಾಡುತ್ತಲೇ ಬಂದಿದ್ದೀರಿ. ಇದೆಲ್ಲದರಿಂದ ಭಾರತದ ತುಂಬೆಲ್ಲಾ ಗುಣಪಡಿಸಲಾಗದಷ್ಟು ಗಾಯಗಳಾಗಿವೆ. ಸಾವಿರಾರು ಮನೆಗಳ ಬೆಳಕೇ ನಂದಿದೆ. ಇದೀಗ ಅಂತಹ ಪಿತೂರಿ ಪ್ರಕರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದೀರಿ. ನಿಮ್ಮ ಭಕ್ತ ಮಂಡಳಿಯ ಮೂಲಕ "ಎಡಿಟೆಡ್ ಪೋಸ್ಟರ್" ಎಂದು ತಿಪ್ಪೆ ಸಾರಿಸಲು ಹೋಗಿ ವಿಫಲರಾದಿರಿ. ಈಗ "ಕಣ್ತಪ್ಪು, ವಿಷಾದ" ಎಂದು ಪ್ರಕರಣವನ್ನು ಗೌಣಗೊಳಿಸಲು ಹತಾಷ ಯತ್ನ ನಡೆಸುತ್ತಿದ್ದೀರಿ. ನಿಮ್ಮ ಇಂತಹ ಆಟಗಳನ್ನು ನಾಡು ನೋಡುತ್ತಲೇ ಬಂದಿದೆ ಎಮದು ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮವು ಮಾಧ್ಯಮವಾಗಿರಬೇಕೆ ಹೊರತು ಬಡಪಾಯಿಗಳ ರಕ್ತ ಹರಿಸುವ ಸಂಚುಕೋರ ಗುಂಪು ಆಗಬಾರದು. ರಾಜ್ಯ ಸರಕಾರ ಇದನ್ನು "ವಿಷಾದ" ದಲ್ಲಿ ಮುಗಿಸಬಾರದು. "ದೇಶ ದ್ರೋಹ, ಆಂತರಿಕ ದಂಗೆ" ಗೆ ಪ್ರಚೋದನೆ ಎಂದು ಪರಿಗಣಿಸಿ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ .


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News