ಸರಕಾರ ಗಡಿನಾಡ ಅಭಿವೃದ್ಧಿಗೆ ಗಮನ ಹರಿಸಲಿ: ಸಂಸದ ಜಿಗಜಿಣಗಿ

Update: 2023-11-19 16:33 GMT

ಮಂಗಳೂರು: ಗಡಿನಾಡಿನ ಶಾಲೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಗಳು ಗಮನಹರಿಸಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಚಂದಪ್ಪ ಜಿಗಜಿಣಗಿ ಅಭಿಪ್ರಾಯಪಟ್ಟಿದ್ದಾರೆ.

ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ರವಿವಾರ ಉಪ್ಪಳದ ಬಾಯಾರ್‌ಪದವು ಪ್ರಶಾಂತಿ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಾನು ಗಡಿನಾಡಿನವನಾಗಿ ಗಡಿನಾಡಿನ ಜನರ ಭಾವನೆಗಳನ್ನು, ಪರಿಸ್ಥಿತಿಯನ್ನು, ಶಾಲೆಗಳು ಮತ್ತು ಮಕ್ಕಳು ಎದುರಿಸು ತ್ತಿರುವ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಕಳೆದ 20 ವರ್ಷಗಳಿಂದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ಕಾಸರಗೋಡು ಭಾಗದ ಕನ್ನಡಿಗರು ಮತ್ತು ಮಹಾರಾಷ್ಟ್ರದ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ ಒಂದೇ ರೀತಿಯಾ ಗಿದೆ. ಗಡಿನಾಡಿನ ಉತ್ತಮ ಶಿಕ್ಷಣ ನೀಡುವ ಶಾಲೆಗಳಿಲ್ಲ. ಸರಕಾರವು ಗಮನ ನೀಡದ ಹಿನ್ನೆಲೆಯಲ್ಲಿ ಗಡಿಭಾಗದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಕರ್ನಾಟಕ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ ಕಾಸರಗೋಡು ಕನ್ನಡದ ನೆಲೆಬೀಡು. ಕಾಸರಗೋಡು ಕನ್ನಡಿಗರ ಹೃದಯದಲ್ಲಿ ನೆಲಸಿರುವ ಊರು. ಇಲ್ಲಿ ಕನ್ನಡದ ಅಭಿವೃದ್ಧಿ ಮುಂದುವರಿದಿದೆ. ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಗುರುತಿಸಿಕೊಂಡ ಕಾಸರಗೋಡಿನ ಕನ್ನಡ ಭಾಷೆ, ಕಲೆ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಿಂದಿನಿಂದಲೂ ಆಸಕ್ತಿ ವಹಿಸಿದ್ದಾರೆ ಎಂದು ಹೇಳಿದರು.

ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕರಾದ ಪ್ರದೀಪ ಕುಮಾರ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಜಯಂತಿ,ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಾ.ಎಂ ಪಿ. ಶ್ರೀನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಾಸುದೇವ ಹೊಳ್ಳ, ಪ್ರಶಾಂತಿ ವಿದ್ಯಾಲಯದ ಉಪಾಧ್ಯಕ್ಷ ಪೆಲ್ತಡ್ಕ ರಾಮಕೃಷ್ಣ ಭಟ್, ಮುಂಬೈ ಅಂಧೇರಿ ಕರ್ನಾಟಕ ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ, ಮಂಜೇಶ್ವರ ಸಾಂಸ್ಕೃತಿಕ ಮುಖಂಡ ಅರಿಬೈಲು ಗೋಪಾಲ ಶೆಟ್ಟಿ , ಕೊಚ್ಚಿನ್ ಕನ್ನಡ ಸಂಘದ ಉಪಾಧ್ಯಕ್ಷ ಗಿರೀಶ್ ಪಡ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕೆ.ಕೆ. ಗಂಗಾಧರನ್-ಸಾಹಿತ್ಯ, ಎಂ.ಸಂಜೀವ ಶೆಟ್ಟಿ - ಸಮಾಜಸೇವೆ, ಆಯಿಷಾ ಕಾರ್ಕಳ -ಸಮಾಜ ಸೇವೆ, ಗೋ ನಾ ಸ್ವಾಮಿ-ಜಾನಪದ, ದಿವಾಕರ ಬಿ ಶೆಟ್ಟಿ -ಪತ್ರಿಕೋದ್ಯಮ, ರೂಪಶ್ರೀ ವರ್ಕಾಡಿ -ಚಲನಚಿತ್ರ, ವಂದನಾ ರೈ ಕಾರ್ಕಳ- ಸಮೂಹ ಮಾಧ್ಯಮ, ವಾಸು ಬಾಯಾರು-ಯಕ್ಷಗಾನ ಹಾಗೂ ರಂಗಭೂಮಿ, ನಿತ್ಯಾನಂದ ಡಿ ಕೋಟ್ಯಾನ್- ಮುಂಬೈ ಗೋರಗಾಂವ್ ಕರ್ನಾಟಕ ಸಂಘಕ್ಕೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ , ಕೇರಳ ರಾಜ್ಯೋದಯ ಪ್ರಶಸ್ತಿ ಪುರಸ್ಕೃತ ಶಂಕರ ಸಾಯಿ ಕೃಪಾ ಮತ್ತು ಮುಂಬೈನ ಸಮಾಜ ಸೇವಕಿ ಶಶಿಕಲಾ ಪೂಂಜಾ ಇವರನ್ನು ಅಭಿನಂದಿಸಲಾಯಿತು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್, ಸಂಚಾಲಕ ಎ.ಆರ್.ಸುಬ್ಬಯ್ಯಕಟ್ಟೆ, ಕೋಶಾಧಿಕಾರಿ ಝಡ್‌ಎ ಕಯ್ಯಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವಿದ್ಯಾಗಣೇಶ ಅಣಂಗೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಿವೃತ್ತ ಅಧ್ಯಾಪಕ ಪನೆಯಾಲ ವೆಂಕಟ್ರಮಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 12 ಮಂದಿ ಹಿರಿಯ ಕಿರಿಯ ಕವಿಗಳು ಭಾಗವಹಿಸಿ ಕವನ ವಾಚಿಸಿದರು. ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಸಿಂಗಾರಿ ಮೇಳ, ಯೋಗ ನೃತ್ಯ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News