ಮಂಗಳೂರು: ನೂತನ ವಕ್ಫ್ ಮಸೂದೆಯ ಬಗ್ಗೆ ಸಮಾಲೋಚನಾ ಸಭೆ
ಮಂಗಳೂರು: ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿರುವ ನೂತನ ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇತೃತ್ವದಲ್ಲಿ ನಗರದ ಖಾಸಗಿ ಹೊಟೇಲಿನಲ್ಲಿ ಶನಿವಾರ ಸಮಾಲೋಚನಾ ಸಭೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ, ನೋಟರಿ ಬಿ.ಎ. ಮುಹಮ್ಮದ್ ಹನೀಫ್ ನೂತನ ವಕ್ಫ್ (ತಿದ್ದುಪಡಿ) ಮಸೂದೆಯ ಜಾರಿಯಾದರೆ ಆಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಈವರೆಗಿನ ವಕ್ಫ್ ಮಸೂದೆಯಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಕೇಂದ್ರ ಸರಕಾರವು ತರಾತುರಿ ಯಲ್ಲಿ ಜಾರಿಗೊಳಿಸಲು ಮುಂದಾಗಿರುವ ನೂತನ ವಕ್ಫ್ (ತಿದ್ದುಪಡಿ) ಮಸೂದೆಯಿಂದ ಸಾಕಷ್ಟು ಸಮಸ್ಯೆಯಾಗಲಿದೆ. ವಿಪಕ್ಷದ ಪ್ರಬಲ ವಿರೋಧದ ಮಧ್ಯೆಯೂ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ಬಳಿಕ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು ಸರಕಾರ ರಚಿಸಿದೆ. ಅದರಲ್ಲಿ ರಾಜ್ಯದ ಮೂವರು ಸಂಸದರ ಸಹಿತ ದೇಶದ ಒಟ್ಟು 52 ಸಂಸದರಿದ್ದಾರೆ. ಇದೀಗ ವಿವಿಧ ಕ್ಷೇತ್ರದ ಪ್ರಮುಖರ ಅಭಿಪ್ರಾಯಗಳನ್ನು ಪಡೆದು ಸೆ.13ರೊಳಗೆ ತಿಳಿಸಲು ಸೂಚಿಸಿದೆ. ಅದರಂತೆ ರಾಜ್ಯ ವಕ್ಫ್ ಬೋರ್ಡ್ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿದೆ. ಅದಲ್ಲದೆ ರಾಜ್ಯ ವಕ್ಫ್ ಬೋರ್ಡ್ ಇದರ ವಿರುದ್ಧ ಮುಖ್ಯಮಂತ್ರಿಯ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಲು ಪ್ರಯತ್ನ ಸಾಗಿಸಿದೆ. ಮುಖ್ಯಮಂತ್ರಿಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
*ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ಕ್ಯೂಆರ್‌ಕೋಡ್ ಬಳಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಇದನ್ನು ಸದುಪಯೋಗಪಡಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಅನೀಸ್ ಕೌಸರಿ, ಮುಖಂಡರಾದ ಝಕರಿಯಾ ಬಜ್ಪೆ, ಎಸ್.ಎಂ. ರಶೀದ್ ಹಾಜಿ, ಇಬ್ರಾಹೀಂ ಕೋಡಿಜಾಲ್, ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಕಾಜೂರು ದರ್ಗಾ ಅಧ್ಯಕ್ಷ ಇಬ್ರಾಹಿಂ, ರಿಯಾಝ್ ಫರಂಗಿಪೇಟೆ, ಕೆ.ಕೆ. ಶಾಹುಲ್ ಹಮೀದ್, ಹೈದರ್ ಪರ್ತಿಪ್ಪಾಡಿ, ಮುಮ್ತಾಝ್ ಅಲಿ, ಮೂಸಬ್ಬ ಬ್ಯಾರಿ, ಮುಹಮ್ಮದ್ ಕುಂಞಿ, ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ, ಎಸ್.ಕೆ. ಖಾದರ್, ಕೆ. ಅಶ್ರಫ್ ಮತ್ತಿತರರು ಪಾಲ್ಗೊಂಡಿದ್ದರು.