ಮಂಗಳೂರು: ದಿವಂಗತ ಪಿ.ಬಿ. ಡೇಸಾ ಅಂತಿಮ ದರ್ಶನ; ಖಾಸಗಿ ಆಸ್ಪತ್ರೆಗೆ ದೇಹದಾನ

Update: 2024-09-25 12:32 GMT

ಮಂಗಳೂರು, ಸೆ. 25: ಮಾನವ ಹಕ್ಕುಗಳ ಹೋರಾಟಗಾರರಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಕೊಂಡಿದ್ದ ಪ್ಯಾಟ್ರಿಕ್ ಬಿ. ಡೇಸಾ ಅವರು ಮಂಗಳವಾರ ನಿಧನರಾಗಿದ್ದು, ಬುಧವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಅವರ ಇಚ್ಛೆಯಂತೆ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಅವರ ದೇಹವನ್ನು ನಗರ ಕೆಎಂಸಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಪಿ.ಬಿ. ಡೇಸಾ ಅವರ ಮಕ್ಕಳು, ಕುಟುಂಬಿಕರು, ಸ್ನೇಹಿತರು ಉಪಸ್ಥಿತರಿದ್ದು ಅಂತಿಮ ದರ್ಶನದ ಪ್ರಕ್ರಿಯೆ ನಿರ್ವಹಿಸಿದರು. ವೆಲೆನ್ಸಿಯಾ ಚರ್ಚ್‌ನ ಧರ್ಮಗುರು ಉಪಸ್ಥಿತರಿದ್ದರು.

ಪಿಯುಸಿಎಲ್ ಎಂದರೆ ಪಿ.ಬಿ. ಡೇಸಾ ಎನ್ನುವ ಗೌರವವಿತ್ತು

ಪಿ.ಬಿ. ಡೇಸಾ ಅವರನ್ನು ನನ್ನ ವೃತ್ತಿ ಆರಂಭದಿಂದ ಬಲ್ಲೆ. ದ.ಕ. ಜಿಲ್ಲೆಯಲ್ಲಿ ಪಿಯುಸಿಎಲ್ ಎಂದರೆ ಪಿ.ಬಿ. ಡೇಸಾ ಎಂಬ ಗೌರವಕ್ಕೆ ಅವರು ಕಾರಣರಾಗಿದ್ದರು. ಮಾನವ ಹಕ್ಕುಗಳು ಹಾಗೂ ದೀನ ದಲಿತರ ಹಕ್ಕಿನ ಕುರಿತಂತೆ ನಿರಂತರವಾಗಿ ಹೋರಾಟಕ್ಕಿಳಿಯುತ್ತಿದ್ದ ಅವರು, ಇಂತಹ ಹಲವು ಪ್ರಕರಣಗಳಿಗೆ ಸಂಬಂಧಿಸಿ ನನ್ನ ಕಕ್ಷಿದಾರರೂ ಆಗಿದ್ದರು. ಯಾರಾದರೂ ವೈಯಕ್ತಿಕವಾಗಿ ತೊಂದರೆಗೆ ಒಳಗಾದರೂ ಅವರ ಹಕ್ಕಿಗಾಗಿ ಒಬ್ಬಂಟಿಯಾಗಿ ಧ್ವನಿ ಎತ್ತುವ ಛಾತಿ ಹೊಂದಿದ್ದ ಅವರು, ಕೋಮು ಸಂಘರ್ಷದ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟಗಳನ್ನು ನಡೆಸಿದವರು ಎಂದು ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಅಭಿಪ್ರಾಯಿಸಿದ್ದಾರೆ.

ನಗರದ ರೋಶನಿ ನಿಲಯದ ಎದುರಿನ ‘ಎನ್‌ಫೋರ್ಸ್ ಪೌಲೀನ್’ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪಿ.ಬಿ. ಡೇಸಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರು ಈ ಅನಿಸಿಕೆ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳಿಗಾಗಿನ ಅವರ ಹೋರಾಟ ಮಾರ್ಗದರ್ಶಿ

ಮಾನವ ಹಕ್ಕುಗಳಿಗಾಗಿ ಅವರ ಹೋರಾಟ ಇತರರಿಗೂ ಮಾರ್ಗದರ್ಶಿ. ದ.ಕ. ಜಿಲ್ಲೆಯಲ್ಲಿ ಪಿಯುಸಿಎಲ್‌ನ್ನು ವಿಸ್ತರಿಸಿದವರು ಪಿ.ಬಿ. ಡೇಸಾ. ಜಿಲ್ಲೆಯಲ್ಲಿ ನಡೆಯುತ್ತಿದ್ದ ದ್ವೇಷ ಭಾಷಣ, ಮತೀಯ ಸಂಘರ್ಘಗಳು, ಪೊಲೀಸ್ ಕಸ್ಟಡಿಯಲ್ಲಿ ಅಮಾನವೀಯ ಘಟನೆಗಳು ಸಂಭವಿಸಿದಾಗ, ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಜನರನ್ನು ಒಟ್ಟು ಸೇರಿಸಿ ಹೋರಾಟಕ್ಕಿಳಿಯುತ್ತಿದ್ದ ಅವರು, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವರು. ಆ ಕಾರಣದಿಂದಾಗಿಯೇ ಅವರು ಪಿಯುಸಿಎಲ್‌ನ ರಾಷ್ಟ್ರ ಸಮಿತಿಯ ಉಪಾಧ್ಯಕ್ಷರಾಗಿ, ರಾಜ್ಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಟಿ.ಆರ್. ಭಟ್ ಅಭಿಪ್ರಾಯಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News