ಭ್ರಷ್ಟಾಚಾರ ಮುಂದುವರಿದರೆ ಮುಂದೊಂದು ದಿನ ಕ್ರಾಂತಿಯಾಗಲಿದೆ: ಸಂತೋಷ್ ಹೆಗ್ಡೆ

Update: 2024-09-25 12:54 GMT

ಕೊಣಾಜೆ: ಒಂದು ವೇಳೆ ಈ ದೇಶದಲ್ಲಿ ಭ್ರಷ್ಟಾಚಾರ ಇದೇ ರೀತಿ ಮುಂದುವರಿಯುತ್ತಾ ಹೋದರೆ ದೇಶದಲ್ಲಿ ಮುಂದೊಂದು ದಿನ ಕ್ರಾಂತಿಯಾಗುತ್ತದೆ. ಕ್ರಾಂತಿಯಾದರೆ ಈ ದೇಶವು ಒಂದು ದೇಶವಾಗಿ ಉಳಿಯಲ್ಲ. ಭಾಷೆಯ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ಹತ್ತೆನ್ನೆರಡು ಬೇರೆಬೇರೆ ದೇಶಗಳಾಗಬಹುದು. ಇವತ್ತು ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿನ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡ್ತೇವೆ. ಕ್ರಾಂತಿಯಾದರೆ ನಾಳೆ ಸುಪ್ರೀಂ ಕೋರ್ಟ್ ಇರಲ್ಲ ಯಾವ ಕೋರ್ಟ್ ಕೂಡಾ ಇರಲ್ಲ. ಈ ವಾದ‌ ರಣಭೂಮಿಯಲ್ಲಿ ಆಗ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವ ಸಮುದಾಯ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಅವರು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಪನಾ ಭಾಷಣ ಮಾಡಿದರು.

ಇಂದು ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಪ್ರಾಮಾಣಿಕರಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ಮೂಲ‌ ಕಾರಣ ದುರಾಸೆಯ ರೋಗ. ಹಿಂದಿನ ಸಮಾಜದಲ್ಲಿ ಒಂದು ಮೌಲ್ಯ ಇತ್ತು. ತಪ್ಪು ಮಾಡಿದವರನ್ನು ಸಮಾಜ ಬಹಿಷ್ಕಾರ ಮಾಡುತ್ತಿತ್ತು. ಇಂದು ತಪ್ಪು ಮಾಡಿದವರನ್ನೂ ಸ್ವಾಗತಿಸುವ ಕಾಲ ಬಂದಿದೆ. ಸಮಾಜವನ್ನು ಬದಲಾಯಿಸಿದಿದ್ದರೆ ಸಮಾಜಕ್ಕೆ ಆಪತ್ತು‌ ಖಂಡಿತಾ ಇದೆ ಎಂದು ಹೇಳಿದರು.

ದೇಶದಲ್ಲಿ ಬಹಳಷ್ಡು ಅಭಿವೃದ್ಧಿ ಆಗಿದೆ. ಅದರಲ್ಲಿ ಬಹಳಷ್ಟು ದುರಾಸೆಯ ಅಭಿವೃದ್ಧಿಯೂ ಆಗಿದೆ. ಹಿಂದೆ ನಡೆದಿರುವಂತಹ ಜೀಪ್ ಹಗರಣ, ಬೋಪೋರ್ಸ್ ಹಗರಣ, ಕಾಮನ್ ವೆಲ್ತ್ ಹಗರಣ, 2 ಜಿ ಹಗರಣ, ಕೋಲ್ಗೇಟ್ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಕೋಟಿ ಕೋಟಿ ಹಣಗಳು ಸುರಿದು ಹೋದರೆ ದೇಶ ಎಲ್ಲಿ ತಲುಪಬಹುದು ಎಂಬುದನ್ನು ನಾವೇ ಯೋಚನೆ ಮಾಡಬೇಕಿದೆ. ದುರಾಸೆ ಇನ್ನೂ ಕಡಿಮೆ ಆಗಿಲ್ಲ. ಇದೆಲ್ಲ ಬದಲಾವಣೆಯಾಗಬೇಕಿದೆ ಎಂದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ. ದುರಾಸೆ, ಭ್ರಷ್ಟಾಚಾರದ ಮೂಲಕ ಸೋರಿಕೊಂಡು ಹೋಗುವ ಹಣ ಕಮ್ಮಿಯಾದರೆ ನಮ್ಮ ದೇಶವು ಖಂಡಿತವಾಗಿಯೂ ಮೊದಲನೆಯ ಸ್ಥಾನಕ್ಕೆ ಹೋಗು ತ್ತದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ದುರಾಸೆಯ ಹಣದಿಂದ ಶಾಂತಿ ಸೌಹಾರ್ದತೆ ಖಂಡಿತ ವಾಗಿಯೂ ನೆಲೆಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪಾಲಕರು ಮಕ್ಕಳಿಗಾಗಿ ಸಮಯ ಕೊಡಿ

ಇಂದಿನ ಸಮಾಜದಲ್ಲಿ ತಂದೆ ತಾಯಿಗಳಿಬ್ಬರೂ ಕೆಲಸಕ್ಕೆ ಹೋಗುತ್ತಾರೆ, ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಮಕ್ಕಳಲ್ಲಿ ಮಾತನಾಡಲೂ ಸಮಯವಿರುವುದಿಲ್ಲ. ಮಕ್ಕಳ ಕೈಯಲ್ಲಿ ಐಪೋನ್ ಮೊಬೈಲ್ ಗಳಿರುತ್ತವೆ. ಮಕ್ಕಳು ದಾರಿ ತಪ್ಪುವ ಮೊದಲು ಪಾಲಕರು‌ ದಿನದಲ್ಲಿ ಸ್ವಲ್ಪವಾದರೂ ಮಕ್ಕಳಿಗಾಗಿ ಸಮಯ ಕೊಡಿ ಎಂದರು.

ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿ ನಮ್ಮದು. ಭವಿಷ್ಯದ ಜನಾಂಗವನ್ನು ಸೃಷ್ಟಿಸುವ ಜವಾಬ್ದಾರಿಯೊಂದಿಗೆ ವಿವಿ ಗುಣಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಲಿದೆ. ವಿವಿ ಬೆಳವಣಿಗೆಯಲ್ಲಿ ಇದನ್ನು ಕಟ್ಟಿ ಬೆಳೆಸಿದ ಮಹನೀಯರ ಕೊಡುಗೆ ಮಹತ್ವವಾದುದು ಎಂದರು.

ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ ಅವರು‌ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ಎ.ಎಂ. ಖಾನ್ ವಂದಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು‌.












Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News