ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು ಪ್ರಕರಣ: ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ

Update: 2024-09-25 16:37 GMT

ಮುಹಮ್ಮದ್ ಮಾಝಿನ್

ಮಂಗಳೂರು, ಸೆ.25: ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಂಕನಾಡಿಯ ಬೆಂದೂರ್‌ವೆಲ್‌ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್‌ಪ್ಲೆಂಟ್ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆ ತಾತ್ಕಾಲಿಕವಾಗಿ ಬಂದ್ ಮಾಡಿದೆ.

ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನದಂತೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್‌ಪ್ಲೆಂಟ್ ಕ್ಲಿನಿಕ್‌ನ್ನು ಬಂದ್ ಮಾಡಿಸಿದ್ದಾರೆ.

ಮುಹಮ್ಮದ್ ಮಾಝಿನ್ ಅವರಿಗೆ ಕಾಸ್ಮೆಟಿಕ್ ಸರ್ಜರಿಗೆ ಮುನ್ನ ಅರಿವಳಿಕೆ ನೀಡುವಾಗ ಎಸಗಿರುವ ನಿರ್ಲಕ್ಷ್ಯವೇ ಆತನ ಮೃತ್ಯುಗೆ  ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿರುವ ವರದಿ ವಿವಿಧ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಮುಹಮ್ಮದ್ ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಶನಿವಾರ ಬೆಳಗ್ಗೆ ಫ್ಲೋಂಟ್ ಕ್ಲಿನಿಕ್‌ಗೆ ತೆರಳಿದ್ದರು. ಆದರೆ ಅಲ್ಲಿ ಸರ್ಜರಿ ವೇಳೆ ವೈದ್ಯರ ನಿರ್ಲಕ್ಷ್ಯದ ಕಾರಣದಿಂದಾಗಿ ಮೃತಪಟ್ಟಿದ್ದರು ಎಂದು ದೂರಲಾಗಿದೆ.

ಮಾಝಿನ್ ಪ್ರಾಣ ಕಳಕೊಳ್ಳಲು ಫ್ಲೋಂಟ್ ಕ್ಲಿನಿಕ್‌ನ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಜರಿಗೆ ಮುನ್ನ ವೈದ್ಯರು ಅರಿವಳಿಕೆ ನೀಡಿದ್ದರು. ಆ ವೇಳೆ ಮಾಡಿದ ಎಡವಟ್ಟಿನಿಂದ ಮಾಝಿನ್ ಪ್ರಾಣ ಕಳಕೊಳ್ಳುವಂತಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಆರೋಗ್ಯ ಅಧಿಕಾರಿಗಳ ತಂಡ ಕ್ಲಿನಿಕ್‌ಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಕಲೆ ಹಾಕಿದೆ. ಜಿಲ್ಲಾಧಿಕಾರಿ ಅವರು ಪ್ರಕರಣದ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

ಕ್ಲಿನಿಕ್‌ನಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವುದು ಆರೋಗ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ತನಿಖೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಸಮಿತಿಯು ತನಿಖೆಗೆ ನಡೆಸಿ ವರದಿ ಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

Full View


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News