ಎಂ ಆರ್‌ ಪಿಎಲ್‌, ಎಚ್‌ ಪಿಸಿಎಲ್‌ ಗೆ ನಮ್ಮ ಅಂತರ್ಜಲದ ಮೇಲೆ ಕಣ್ಣು: ಮುನೀರ್‌ ಕಾಟಿಪಳ್ಳ

Update: 2024-01-31 06:05 GMT

ಮಂಗಳೂರು: ʼಎಂ ಆರ್‌ ಪಿಎಲ್‌, ಎಚ್‌ ಪಿಸಿಎಲ್‌  ನಮ್ಮ ಜನಗಳಿಗೆ ಯಾವ ಅನುಕೂಲ ಮಾಡಿಕೊಡದಿದ್ದರೂ, ತುಳುನಾಡಿನ ಪರಿಸರವನ್ನು ನಾಶ ಮಾಡುವುದರಲ್ಲಿ, ನೆಲ ಜಲವನ್ನು ಎಗ್ಗಿಲ್ಲದೆ ಲೂಟಿ ಮಾಡುವುದರಲ್ಲಿ ಯಾವ ಮುಲಾಜೂ ತೋರುವುದಿಲ್ಲ. ಈ ಕಂಪೆನಿಗಳಿಗಾಗಿಯೆ ನೇತ್ರಾವತಿಗೆ ಪ್ರತ್ಯೇಕ ಅಣೆಕಟ್ಟು, ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಬದಲಾಯಿಸುವ ಘಟಕ ಇದ್ದರೂ ಇವರಿಗೆ ನಮ್ಮ ಅಂತರ್ಜಲದ ಮೇಲೆ ಕಣ್ಣುʼ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ .

ಈ ಬಗ್ಗೆ ಪತ್ರಿಕಾ ಪ್ರಕಟನೆ ಮೂಲಕ ಪ್ರತಿಕ್ರಿಯಿಸಿರುವ ಅವರು,  ಈಗ ಮಂಗಳೂರಿನ ಸುರತ್ಕಲ್ ಸುತ್ತಮುತ್ತಲಿನ ಖಾಸಗಿ ಬಾವಿಗಳಿಂದ ಕಳೆದ ಎರಡು ಮೂರು ತಿಂಗಳಿನಿಂದ ದಿನಕ್ಕೆ ಸರಾಸರಿ 50 ಲಕ್ಷ ಲೀಟರ್ ನಷ್ಟು ನೀರನ್ನು ಅಕ್ರಮವಾಗಿ ಹೀರಿ ಹತ್ತಾರು 12 ಚಕ್ರದ ಟ್ಯಾಂಕರ್ ಗಳ ಮೂಲಕ ಎಚ್‌ ಪಿಸಿಎಲ್‌ ಘಟಕದ ಒಳಗಡೆ ಸಂಗ್ರಹಿಸುತ್ತಿದೆ. ಕೃಷ್ಣಾಪುರ, ಚೊಕ್ಕಬೆಟ್ಟು ಭಾಗದ ಬಾವಿಗಳ ಅಂತರ್ಜಲ ಈ ನೀರು ಲೂಟಿಯಿಂದ ಈಗಾಗಲೆ ಪಾತಾಳ ತಲುಪಿದೆ.

ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಅಂತರ್ಜಲ ಘಟಕವನ್ನು ಸಂಪರ್ಕಿಸಿದರೆ ಹಾರಿಕೆಯ ಉತ್ತರ ನೀಡಿ ಯಾಮಾರಿಸುತ್ತಾರೆ. ಒಂದು ಮಾಹಿತಿ ಪ್ರಕಾರ ಎಂ ಆರ್‌ ಪಿಎಲ್‌, ಎಚ್‌ ಪಿಸಿಎಲ್‌ ಗಳಿಗೆ ಅವರ ಘಟಕದ ಒಳಗಡೆ ಬೋರ್ ವೆಲ್, ಬಾವಿಗಳ ಮೂಲಕ ಅಂತರ್ಜಲ ಎತ್ತಲು ಅಂತರ್ಜಲ ಇಲಾಖೆ ಎನ್‌ಓಸಿ ನೀಡಿದೆ. ಆದರೆ, ಇಲ್ಲಿ ಮಹಾ ಲೂಟಿ ನಡೆಯುತ್ತಿದೆ. ಈ ಭಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆದರೆ ತುರ್ತು ಬಳಕೆಗೆ ಉಪಯೋಗವಾಗ ಬೇಕಿದ್ದ ಈ ನೀರಿನ ಒರತೆಯ ಬಾವಿ, ಬೋರ್ ವೆಲ್ ಗಳಿಂದ ಒಂದು ಹನಿ ನೀರೂ ನಾಗರಿಕರಿಗೆ ಸಿಗಲಿಕ್ಕಿಲ್ಲ. ಕಳೆದ ಮೂರು ತಿಂಗಳಿನಿಂದ ಈ ಬೃಹತ್ ಕೈಗಾರಿಕೆಗಳ ಅಂತರ್ಜಲ ಲೂಟಿ ನಡೆಯುತ್ತಿದ್ದರೂ ಎಲ್ಲಾ ಇಲಾಖೆಗಳು ಮೌನ ತಾಳಿವೆ. ಜನ ಸಾಮಾನ್ಯರಿಗೆ ಇದರ ಪರಿವೆಯೇ ಇಲ್ಲ. ಬಿಜೆಪಿ ಜನ ಪ್ರತಿನಿಧಿಗಳಿಗೆ ಇದೆಲ್ಲ ವಿಷಯವೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News