ಮೂಡುಬಿದ್ರೆ: ಲೈಂಗಿಕ ಕಿರುಕುಳ ಆರೋಪ; ಶಾಲಾ ಅಧ್ಯಾಪಕನ ವಿರುದ್ಧ ಪ್ರಕರಣ ದಾಖಲು

Update: 2024-03-15 09:06 GMT

ಮೂಡುಬಿದ್ರೆ: ಕಲ್ಲಮುಂಡ್ಕೂರು ಸರ್ಕಾರಿ ಅನುದಾನಿತ ಶಾಲೆಯ ಅಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ.

ಆರೋಪಿಯನ್ನು ಶಾಲೆಯ ಸಹ ಅಧ್ಯಾಪಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಗುರುವ ಮೊಗೇರಾ ಎಂದು ಗುರುತಿಸಲಾಗಿದೆ.

ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಧ್ಯಾಪಕ ಗುರುವ ಮೊಗೇರಾ ಅವರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಸದಾನಂದ ಅವರು ಮೂಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ.28ರಂದು ಹತ್ತನೇ ತರಗತಿಯ ಕೆಲವು ವಿದ್ಯಾರ್ಥಿನಿಯರು ಬಂದು ಸಹ ಶಿಕ್ಷಕ ಗುರುವ ಮೊಗೇರಾ ಅವರಿಂದ ತೊಂದರೆಗಳಾಗುತ್ತಿರುವ ಕುರಿತು ಹೇಳಿಕೊಂಡಿದ್ದರು. ಈ ಕುರಿತು ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಗುರುವ ಮೊಗೇರಾ ಅವರು, ಶಾಲೆಯ ಆಫೀಸ್‌ ಕೋಣೆಯಲ್ಲಿರದೇ, ಪ್ರತ್ಯೇಕ ಕೊಠಡಿಯಲ್ಲಿರುತ್ತಾರೆ. ಪಠ್ಯ ಸಂಬಂಧಿತ ವಿಷಯಕ್ಕೆ ಅಥವಾ ರಜಾ ಅರ್ಜಿ ಹಿಡಿದುಕೊಂಡು ಅವರ ಬಳಿಗೆ ಹೋದಾಗ, ಇಬ್ಬರು ಹೆಣ್ಣುಮಕ್ಕಳು ಹೋದರೆ ಒಬ್ಬರನ್ನು ಬೈದು ಹೊರಗೆ ಕಳುಹಿಸಿ ಒಬ್ಬಳನ್ನೇ ಕೋಣೆಯಲ್ಲಿಸಿರಿಕೊಂಡು ನಮ್ಮ ಕೈ ಮುಟ್ಟುವುದು, ದೇಹದ ಭಾಗಗಳನ್ನು ಮುಟ್ಟುವುದು, ಹೆಗಲ ಮೇಳೆ ಕೈಹಾಕಿಕೊಂಡು ಮಾತನಾಡುವುದು, ಹೆಣ್ಣು ಮಕ್ಕಳಾದ ನಮ್ಮ ಮೇಳೆ ಬ್ಯಾಡ್‌ ಟಚ್‌ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕುರುಕುಳ ನೀಡಿರುವ ಅಧ್ಯಾಪಕ ಗುರುವ ಮೊಗೇರಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಲೆಯ ಮುಖ್ಯ ಶಿಕ್ಷಕರು ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಮಾ.12ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ ಐ ಆರ್ ತಯಾರಿಸಿ ಮಾ12ರಂದೇ ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರನ್ನು ಸಂಪರ್ಕಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಬರುತ್ತಿದ್ದು, ಪೊಲೀಸ್‌ ಠಾಣೆಯ ದೂರವಾಣಿ ಸಂಖ್ಯೆಯೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News