ಮುಮ್ತಾಝ್ ಅಲಿ ಪ್ರಕರಣ | ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದೇನು?
ಮಂಗಳುರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್ ಅಲಿ ಪ್ರಕರಣದಲ್ಲಿ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ʼನಿನ್ನೆ ಬೆಳಿಗ್ಗೆ ಕೂಳೂರು ಸೇತುವೆಯಿಂದ ಮಾಜಿ ಶಾಸಕರ ಸಹೋದರ ನದಿಗೆ ಹಾರಿದ್ದ ಅನುಮಾನದ ಮೇಲೆ ಎನ್.ಡಿ.ಅರ್.ಎಫ್ , ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಸೇರಿ 6 ತಂಡಗಳು ಹುಡುಕಾಟ ನಡೆಸಿದ್ದವು. ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆ ಆಗಿರಲಿಲ್ಲ. ಇಂದು(ಸೋಮವಾರ) ಬೆಳಗ್ಗೆ 10.15 ರ ವೇಳೆಗೆ ಅವರ ಮೃತ ದೇಹ ಪತ್ತೆಯಾಗಿದೆʼ ಎಂದು ತಿಳಿಸಿದರು.
ಮುಮ್ತಾಝ್ ಅಲಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಕುಟುಂಬಸ್ಥರು ಕಾವೂರು ಠಾಣೆಗೆ ಬ್ಲಾಕ್ ಮೇಲ್ ಬಗ್ಗೆ ದೂರು ನೀಡಿದ್ದರು. ಹನಿಟ್ರ್ಯಾಪ್ ರೀತಿಯಲ್ಲಿ ಆರು ಜನರ ಮೇಲೆ ಅವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದರು.
ಮುಮ್ತಾಝ್ ಅಲಿಯವರು 50 ಲಕ್ಷ ಹಣ ಕೊಟ್ಟಿದ್ದರು, ಹಾಗೆಯೇ 25 ಲಕ್ಷ ಚೆಕ್ ಮೂಲಕ ನೀಡಿದ್ದರು. ವಾಯ್ಸ್ ಕ್ಲಿಪ್ಪಿಂಗ್ ನಲ್ಲಿ ಮುಮ್ತಾಝ್ ಅಲಿ, ಕೆಲವರ ಹೆಸರು ಉಲ್ಲೇಖ ಮಾಡಿದ್ದಾರೆ. ಆರೋಪಿ ಸತ್ತಾರ್ ಹೆಸರು ವಾಯ್ಸ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಎ1 ಆರೋಪಿ ಮಹಿಳೆ ರೆಹಮತ್ ಸಂಬಂಧಿ ಅಲ್ಲ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸಿಪಿ ಮನೋಜ್ ಕುಮಾರ್, ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.