ಗುಡಿಸಲಿಗೆ ಬೆಂಕಿ: ನಗದು, ದಾಖಲೆ ಪತ್ರ ಭಸ್ಮ

Update: 2024-10-18 17:27 GMT

ಪುತ್ತೂರು: ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಶುಕ್ರವಾರ ಹಗಲು ಹೊತ್ತಿನಲ್ಲಿ ನಡೆದಿದೆ.

ಪಾದೆಡ್ಕ ನಿವಾಸಿ ಪದ್ಮಾವತಿ ಎಂಬವರ ಶೀಟ್ ಅಳವಡಿಸಿರುವ ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗೆ ಬ್ಯಾಗ್‍ವೊಂದರಲ್ಲಿ ಇಟ್ಟಿದ್ದ ರೂ.15000 ನಗದು, ದಾಖಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಯಾಗಿದೆ. ಗುಡಿಸಲಿಗೆ ಗೋಡೆ ಇಲ್ಲದೇ ಇರುವುದರಿಂದ ಗುಡಿಸಲಿನ ಸುತ್ತ ನೆಟ್ ಅಳವಡಿಸಲಾಗಿದ್ದು ಎರಡು ಬದಿಯ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಪದ್ಮಾವತಿ ಅವರ ಪತಿ ನಿಧನ ಹೊಂದಿದ್ದು ಈ ಮನೆಯಲ್ಲಿ ಪದ್ಮಾವತಿ ಮತ್ತು ಅವರ 8 ವರ್ಷದ ಪುತ್ರ ವಾಸವಾಗಿದ್ದಾರೆ.

ಪದ್ಮಾವತಿಯವರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಸ್ಥಳೀಯರು ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ತಿಳಿಸಿದ್ದು ಕೂಡಲೇ ಪದ್ಮಾವತಿ ಮನೆಗೆ ಬಂದಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿತ್ತು. ಮನೆಯೊಳಗಿದ್ದ ದಿನಸಿ ಸಾಮನುಗಳೂ ಬೆಂಕಿಗಾಹುತಿಯಾಗಿದೆ. ಘಟನೆ ಕುರಿತು ಪದ್ಮಾವತಿಯವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News