ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವಿರುದ್ಧ ದಾಖಲಾಗಿದ್ದ ಪ್ರಕರಣ ನ್ಯಾಯಾಲಯ ಖುಲಾಸೆ

Update: 2024-11-28 16:24 GMT

ಸುರತ್ಕಲ್:‌ ಎಂಆರ್‌ಪಿಎಲ್ ಕೋಕ್ ಸಲ್ಫರ್ ಮಾಲಿನ್ಯದ ವಿರುದ್ಧ ಡಿವೈಎಫ್‌ಐ ಮಾರ್ಗದರ್ಶನದಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನಡೆಸಿದ್ದ ಹೋರಾಟಗಳಲ್ಲಿ ದಾಖಲಾಗಿದ್ದ 5 ಪ್ರಕರಣಗಳ ಪೈಕಿ ಕೊನೇಯ ಪ್ರಕರಣವನ್ನು ನ್ಯಾಯಾಲಯವು ಇಂದು ಖುಲಾಸೆಗೊಳಿಸಿ ತೀರ್ಪು ನೀಡಿದೆ.

9 ವರ್ಷಗಳ ಹಿಂದೆ ಎಂಆರ್‌ಪಿಎಲ್ ಕೋಕ್ ಸಲ್ಫರ್ ಮಾಲಿನ್ಯದ ವಿರುದ್ಧ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸತತ ಹೋರಾಟಗಳನ್ನು ಹಮ್ಮಿಕೊಂಡಿತ್ತು. 2005ರಲ್ಲಿ ಕೋಕ್‌ ಸಲ್ಫರ್‌ ಘಟಕಕ್ಕೆ ಸಂಬಂಧಿಸಿ ಜೋಕಟ್ಟೆ ಪ್ರದೇಶದಲ್ಲಿ ನಡೆಸ ಲಾಗುತ್ತಿದ್ದ ಕಾಮಗಾರಿಗಳಿಗೆ ಹೋರಾಟ ಸಮಿತಿ ತಡೆಯೊಡ್ಡಿತ್ತು. ಆಗ ಪೊಲೀಸರು ಹೋರಾಟಗಾರರನ್ನು ಬಂಧಿಸಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ಸ್ಥಳಾಂತರಿಸುತ್ತಿದ್ದರು. ಈ ವೇಳೆ ಹೋರಾಟಗಾರರನ್ನು ಬಂಧಿಸಿ ಕರೆದೊಯ್ಯಲಾಗುತ್ತಿದ್ದ ಪೊಲೀಸ್‌ ವಾಹನಕ್ಕೆ ಜೋಕಟ್ಟೆ ಹಳೆ ಮಸೀದಿ ಬಳಿ ಮತ್ತಷ್ಟು ಹೋರಾಟಗಾರರು ತಡೆಯೊಡ್ಡಿದ ಕುರಿತು ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಂಆರ್‌ಪಿಎಲ್ ಕೋಕ್ ಸಲ್ಫರ್ ಮಾಲಿನ್ಯದ ವಿರುದ್ಧ ಹೋರಾಟಕ್ಕೆ ಸಂಬಂಧಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಗೆ 2016ರಲ್ಲೇ ಜಯ ಸಿಕ್ಕಿದ್ದರೂ, ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಿಂದ ಹೋರಾಟಗಾರರಿಗೆ ಮುಕ್ತ ದೊರೆತಿರಲಿಲ್ಲ. ಹಾಗಾಗಿ ಹೋರಾಟ ಸಮಿತಿಯು ಹಿರಿಯ ವಕೀಲರಾದ ದಿನೇಶ್‌ ಹೆಗ್ದೆ ಉಳೆಪಾಡಿ ಅವರ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿತ್ತು. ಈ ಹೋರಾಟಕ್ಕೆ ಇಂದು ಜಯಸಿಕ್ಕಿದ್ದು, ಹೋರಾಟಗಾರರ ವಿರುದ್ಧ ಪಣಂಬೂರು ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಮಂಗಳೂರು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಂತೆ ಹೋರಾಟ ಸಮಿತಿಯ ಮಯ್ಯದ್ದಿ, ಫಕ್ರುದ್ದೀನ್‌ ಎಂಬ ಇಬ್ಬರು ಮೃತಪಟ್ಟಿದ್ದರು.

ಪ್ರಕರಣ ಖುಲಾಸೆಗೊಂಡ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಪರವಾಗಿ ಉಚಿತವಾಗಿ ವಾದಿಸಿದ್ದ ಹಿರಿಯ ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ ಅವರನ್ನು ನ್ಯಾಯಾಲಯದ ಆವರಣದಲ್ಲಿ ಹೂಗುಚ್ಛ ನೀಡಿ ಧನ್ಯವಾದ ಸಮರ್ಪಿಸಿತು.

ನಮ್ಮ ಮೇಲಿನ ಕೇಸುಗಳನ್ನು ಯಾವ ಸರಕಾರವೂ ಹಿಂಪಡೆದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಸರಕಾರಗಳು ಅನಿವಾರ್ಯವಾಗಿವೆ. ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಅವರು ಉಚಿತವಾಗಿ ನಮ್ಮ ಪರವಾಗಿ ವಾದ ಮಂಡಿಸಿದ್ದು ನಮಗೆ ಹೆಚ್ಚಿನ ಹೊರೆ ಎನಿಸಲಿಲ್ಲ. ಅವರ ಹಲವಾರು ಕಿರಿಯ ವಕೀಲರು ಎಂಆರ್‌ಪಿಎಲ್‌ ಹೋರಾಟದ ಪ್ರಕರಣಗಳನ್ನು ವಿಶೇಷ ಕಾಳಜಿಯಿಂದ ನಿರ್ವಹಿಸಿದ್ದಾರೆ. ಅವರೆಲ್ಲರಿಗೂ ನಾವು ಋಣಿಯಾಗಿದ್ದೇವೆ. ಜನಪರ ಹೋರಾಟಗಳು ನಡೆಯುತ್ತಲೇ ಇರುತ್ತವೆ. ದೊಣ್ಣೆ ನಾಯಕರ ಆದೇಶಕ್ಕೆ ನಾವು ಕಿವಿಗೊಡುವುದಿಲ್ಲ.

ಮುನೀರ್ ಕಾಟಿಪಳ್ಳ, ಸಂಚಾಲಕರು, ಜೋಕಟ್ಟೆ ನಾಗರೀಕ ಹೋರಾಟ ಸಮಿತಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News